ನೂತನ ರಾಷ್ಟ್ರಾಧ್ಯಕ್ಷರ ಆಯ್ಕೆ ಮಾಡಲು ಬಿಜೆಪಿ ಸ್ವತಂತ್ರವಾಗಿದೆ – ಆರ್ ಎಸ್ ಎಸ್

ಭಾರತೀಯ ಜನತಾ ಪಾರ್ಟಿಯ ನೂತನ ರಾಷ್ಟ್ರೀಯ ಅಧ್ಯಕ್ಷರು ಯಾರು ಆಗಬೇಕು ಎನ್ನುವುದು ಅವರದ್ದೇ ಆಂತರಿಕ ವಿಷಯ. ಅದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದು ಆರ್ ಎಸ್ ಎಸ್ ಸ್ಪಷ್ಟಪಡಿಸಿದೆ. ಸಂಘದ ಸಹ ಸರಕಾರ್ಯವಾಹ ಅರುಣ್ ಕುಮಾರ್ ಅವರಿಗೆ ಮಾಧ್ಯಮದವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ತಡವಾಗುತ್ತಿರುವುದರ ಬಗ್ಗೆ ಕೇಳಿದಾಗ ಅವರು ಅದರಲ್ಲಿ ನಾವು ಯಾವುದೇ ಪಾತ್ರ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅವರು ಅಖಿಲ ಭಾರತೀಯ ಪ್ರತಿನಿಧಿ ಸಭಾದ ಎರಡನೇ ದಿನ ಸುದ್ದಿಗೋಷ್ಟಿಯಲ್ಲಿ ಸಭಾದ ಕಾರ್ಯಕ್ರಮದ ಬಗ್ಗೆ ಮಾತನಾಡುವಾಗ ಮಾಧ್ಯಮದವರು ಈ ಪ್ರಶ್ನೆ ಕೇಳಿದ್ದಾರೆ.
ಪ್ರಸ್ತುತ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಜೆ ಪಿ ನಡ್ಡಾ ಅವರು 2020 ರಿಂದ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅವಧಿ ಮೂರು ವರ್ಷದಾಗಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ನಡ್ಡಾ ಅವರನ್ನು ಒಂದು ವರ್ಷ ಹೆಚ್ಚುವರಿ ಅವಧಿಗೆ ಮುಂದುವರೆಸಲಾಗಿತ್ತು. ಆದರೆ ಈಗ ಲೋಕಸಭಾ ಚುನಾವಣೆ ಕಳೆದು ಒಂದು ವರ್ಷ ಆಗುತ್ತಾ ಬರುತ್ತಿರುವ ಈ ಹೊತ್ತಿನಲ್ಲಿ ಹೊಸ ಅಧ್ಯಕ್ಷರ ನೇಮಕದ ಬಗ್ಗೆ ಪಕ್ಷದ ವರಿಷ್ಟರು ನಿರ್ಣಯ ತೆಗೆದುಕೊಳ್ಳಬೇಕಿದೆ.
ಈ ನಡುವೆ ಯಾರು ಹೊಸ ಅಧ್ಯಕ್ಷರು ಎನ್ನುವ ಬಗ್ಗೆ ಬಿಜೆಪಿ ವರಿಷ್ಟ ಮಂಡಳಿ ಮತ್ತು ಆರ್ ಎಸ್ ಎಸ್ ನಡುವೆ ಒಮ್ಮತ ಮೂಡಿಲ್ಲ ಎನ್ನುವ ವದಂತಿ ಎಲ್ಲಾ ಕಡೆ ಹರಡಿತ್ತು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಇಷ್ಟದ ವ್ಯಕ್ತಿಯನ್ನು ಅಧ್ಯಕ್ಷ ಮಾಡಲು ಆರ್ ಎಸ್ ಎಸ್ ಸಮ್ಮಿತಿಸಿಲ್ಲ ಮತ್ತು ಸಂಘ ಹೇಳಿದ ವ್ಯಕ್ತಿಯ ಬಗ್ಗೆ ಮೋದಿಯವರಿಗೆ ಒಲವಿಲ್ಲ ಎನ್ನುವಂತಹ ಗಾಳಿ ಸುದ್ದಿ ಹರಡಲು ಶುರುವಾಗಿತ್ತು. ಆದ್ದರಿಂದ ಹೊಸ ಅಧ್ಯಕ್ಷರ ನೇಮಕ ತಡವಾಗುತ್ತಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು. ಎಲ್ಲಾ ರಾಜ್ಯಾಧ್ಯಕ್ಷರ ನೇಮಕದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ನೇಮಕ ನಡೆಯಲಿದೆ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿದ್ದರೂ ಹೊಸ ಅಧ್ಯಕ್ಷರ ಆಯ್ಕೆಯ ವಿಷಯದಲ್ಲಿ ರೆಕ್ಕೆ ಪುಕ್ಕ ಮೂಡಿ ಅದು ಹೊಸ ಚರ್ಚೆಗೆ ನಾಂದಿ ಹಾಡಿತ್ತು.
ಪ್ರಸ್ತುತ ಜೆಪಿ ನಡ್ಡಾ ಅವರು ಕೇಂದ್ರ ಆರೋಗ್ಯ ಸಚಿವರೂ ಆಗಿರುವುದರಿಂದ ಅವರಿಗೆ ಎರಡೆರಡು ಜವಾಬ್ದಾರಿಗಳನ್ನು ನಿರ್ವಹಿಸುವುದು ಸವಾಲಾಗಿರುವುದರಿಂದ ಆದಷ್ಟು ಶೀಘ್ರದಲ್ಲಿ ಪಕ್ಷದ ಅತೀ ದೊಡ್ಡ ಜವಾಬ್ದಾರಿಯನ್ನು ಬೇರೆಯವರ ಹೆಗಲಿಗೆ ಹೊರಿಸುವ ಅವಶ್ಯಕತೆಯೂ ಪಕ್ಷದ ಮುಖಂಡರಿಗೆ ಇದೆ. ಈ ಬಗ್ಗೆ ಸ್ಪಷ್ಟೀಕರಣ ನೀಡುವ ಸಂದರ್ಭದಲ್ಲಿ ಮಾತನಾಡಿದ ಅರುಣ್ ಕುಮಾರ್ ” ಸಂಘದ ಅಡಿಯಲ್ಲಿ ಕನಿಷ್ಟ 32 ವಿವಿಧ ಸಂಘಟನೆಗಳು ಸೇವಾಕಾರ್ಯದಲ್ಲಿ ನಿರತವಾಗಿದೆ. ಪ್ರತಿ ಸಂಘಟನೆಯಲ್ಲಿ ಸದಸ್ಯರ ಸೇರ್ಪಡೆ, ಪದಾಧಿಕಾರಿಗಳ ನೇಮಕ, ಜಿಲ್ಲೆ, ಮಂಡಲ, ರಾಜ್ಯ ಹೀಗೆ ವಿವಿಧ ಜವಾಬ್ದಾರಿಗಳಿಗೆ ಸೂಕ್ತ ವ್ಯಕ್ತಿಗಳನ್ನು ನೇಮಕ ಮಾಡಿ ಹೊಣೆ ನೀಡುವ ಕೆಲಸವನ್ನು ಅದೇ ಸಂಘಟನೆಗಳ ಪ್ರಮುಖರು ಮಾಡುತ್ತಾರೆ. ಆ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಯಾವುದೇ ಆಯ್ಕೆ ನಡೆಯುವ ಮೊದಲು ಸಂಘ ಯಾವುದೇ ಸಮನ್ವಯ ಬೈಠಕ್ ಮಾಡಲು ಹೋಗುವುದಿಲ್ಲ. ಅದ್ದರಿಂದ ನಾವು ಸಮಾಜ, ರಾಷ್ಟ್ರದ ಏಳಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸೇವಾ ಕಾರ್ಯವನ್ನು ನಡೆಸಿಕೊಂಡು ಹೋಗುತ್ತೇವೆ. ಎಲ್ಲರೂ ಸೇರಿ ರಾಷ್ಟ್ರಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ” ಎಂದು ಹೇಳಿದರು.
Leave A Reply