ರಾಹುಲ್ ಜೀವನದಲ್ಲಿ ಒಂದೇ ದಿನ ಎರಡು ಖುಷಿ!

ಕೆ.ಎಲ್. ರಾಹುಲ್ ಯಾರಿಗೆ ಗೊತ್ತಿಲ್ಲ, ಹೇಳಿ. ಮಾರ್ಚ್ 24, ಅವರ ಬಾಳಿನಲ್ಲಿ ತುಂಬಾ ಸಂತೋಷ ನೀಡಿದ ದಿನ. ಯಾಕೆಂದರೆ ಅವರು ಮತ್ತು ಅವರ ಪತ್ನಿ ಅಥಿಯಾ ಅವರು ಸೇರಿ ಅವರ ಕುಟುಂಬಕ್ಕೆ ಹೊಸ ಪುಟ್ಟ ಅತಿಥಿಯನ್ನು ಸ್ವಾಗತಿಸಿದ ದಿನ. ಹೌದು, ಖ್ಯಾತ ಚಿತ್ರನಟ ಸುನೀಲ್ ಶೆಟ್ಟಿ ತಾತನಾದ ದಿನ. ರಾಹುಲ್ ಹಾಗೂ ಅಥಿಯಾ ಬದುಕಿನಲ್ಲಿ ಅಪ್ಪ, ಅಮ್ಮಾನಾಗಿ ಪ್ರಮೋಶನ್ ಪಡೆದ ದಿನ. ಒಬ್ಬ ತಂದೆಗೆ ಮಗಳು ಸಿಕ್ಕಿದ ಖುಷಿಯ ಜೊತೆ ಅಂದು ಇನ್ನೊಂದು ಖುಷಿ ಕೂಡ ಅವರ ಬಾಳಿನಲ್ಲಿ ಬಂದಿದೆ. ಅದು ಅವರ ಈ ಬಾರಿಯ ತಂಡ ಡೆಲ್ಲಿ ಕ್ಯಾಪಿಟಲ್ಸ್ ಬಹುತೇಕ ಸೋಲಿನ ದವಡೆಯಿಂದ ಪಾರಾಗಿ ಗೆದ್ದು ಬೀಗಿರುವುದು.
ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 209 ರನ್ ಗಳನ್ನು ಬಾರಿಸಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿ ಕ್ರೀಸಿಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರಿಸ್ಥಿತಿ ಹೇಗಿತ್ತು ಎಂದರೆ ದಾಂಡಿಗರು ಒಬ್ಬೊಬ್ಬರಾಗಿ ಪೆವಿಲಿಯನ್ ಕಡೆ ಮುಖ ಮಾಡಿದ್ದರು. ಮೊದಲ ಐದು ವಿಕೆಟುಗಳು ಕೇವಲ 65 ರನ್ನಿಗೆ ಉರುಳುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ಸೋಲನ್ನು ಎಲ್ಲರೂ ಬರೆದಾಗಿತ್ತು. ಬಹುತೇಕ ಮನೆಗಳ ಟಿವಿ ಕೂಡ ಆಫ್ ಆಗಿ ಫಲಿತಾಂಶ ಇಷ್ಟೇ ಎಂದು ಕೂಡ ಷರಾ ಹೇಳಲಾಗಿತ್ತು. ಆದರೆ ನಂತರ ನಡೆದದ್ದೇ ಪವಾಡ. ಮರುದಿನ ಬೆಳಿಗ್ಗೆ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಫಲಿತಾಂಶ ನೋಡಿದವರಿಗೆ ತಮ್ಮ ಕಣ್ಣನ್ನೇ ನಂಬಲಾಗಲಿಲ್ಲ. ಡೆಲ್ಲಿ ಗೆದ್ದು ಬೀಗಿತ್ತು.
ಅದು ಹೇಗೆ?
ವಿಶಾಖಪಟ್ಣಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಪತ್ಭಾಂದವರಂತೆ ಆಡಿದ ಇಬ್ಬರನ್ನು ಇಡೀ ತಂಡ ಮತ್ತು ಆಡಳಿತ ಯಾವತ್ತೂ ಮರೆಯಬಾರದು. ಒಬ್ಬರು ಅಶುತೋಷ್ ಶರ್ಮಾ ಹಾಗೂ ಇನ್ನೊಬ್ಬರು ವಿಫ್ರಾಜ್ ನಿಗಂ. ಅಶುತೋಷ್ ಶರ್ಮಾ ಅವರು 31 ಎಸೆತಗಳಲ್ಲಿ 66 ರನ್ ಹೊಡೆದು ಸ್ಟಾರ್ ಫಿನಿಶರ್ ಎಂದು ಖ್ಯಾತಿಗಳಿಸಿದರೆ, ಚೊಚ್ಚಲ ಪಂದ್ಯವಾಡಿದ ವಿಫ್ರಾಜ್ ನಿಗಂ ಅವರು 15 ಎಸೆತಗಳಲ್ಲಿ 39 ಹೊಡೆದು ತಂಡವನ್ನು ಸೋಲಿನ ಪ್ರಪಾತದಿಂದ ಮೇಲೆತ್ತಿದ್ದರು. ಮೊದಲ 10 ಎಸೆತಗಳಲ್ಲಿಯೇ ಮೂರು ಬಹುಮುಖ್ಯ ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 210 ಎನ್ನುವ ಬೃಹತ್ ಸಾಗರವನ್ನು ಈಜಿ ಮೂರು ಎಸೆತಗಳಿರುವಾಗಲೇ ಗೆಲ್ಲುವ ಮೂಲಕ ಕೆ.ಎಲ್. ರಾಹುಲ್ ಅವರಿಗೆ ಡಬಲ್ ಖುಷಿ ಕೊಟ್ಟಿದೆ. ಮಗುವಿನ ಜನನವನ್ನು ಎದುರು ಕಾಣಲು ರಾಹುಲ್ ಈ ಪಂದ್ಯವನ್ನು ಆಡಿರಲಿಲ್ಲ.
Leave A Reply