ಟಾರ್ಗೆಟ್ ತಲುಪದ ನೌಕರರಿಗೆ ನಾಯಿ ಶಿಕ್ಷೆ!

ಟಾರ್ಗೆಟ್ ಎನ್ನುವ ಶಬ್ದ ಮಾರ್ಕೆಟಿಂಗ್ ಕಂಪೆನಿಯಲ್ಲಿ ಯಾವಾಗಲೂ ದೊಡ್ಡವಾಗಿ ಕೇಳಿಬರುವ ಪ್ರಮುಖ ಪದ. ಟಾರ್ಗೆಟ್ ರೀಚ್ ಆದರೆ ನೌಕರರಿಗೆ ದೀರ್ಗಾಯುಷ್ಯ. ಟಾರ್ಗೆಟ್ ತಲುಪದ ನೌಕರರಿಗೆ ನಿದ್ರೆ, ಊಟ ದೂರ ದೂರ. ಆದ್ದರಿಂದ ತಿಂಗಳೀಡಿ ಹೇಗಾದರೂ ಮಾಡಿ ಟಾರ್ಗೆಟ್ ತಲುಪಲು ಮಾರ್ಕೆಟಿಂಗ್ ವಿಭಾಗದವರು ಒದ್ದಾಡುತ್ತಲೇ ಇರುತ್ತಾರೆ. ಗುರಿ ತಲುಪಲಾಗದವರಿಗೆ ಕಂಪೆನಿಯ ಬಾಸ್ ಗಳಿಂದ ಮಂಗಳಾರತಿ, ಮೆಮೊ ಸಹಿತ ವಿವಿಧ ರೀತಿಯ ಪಾಠ ಇದ್ದೇ ಇರುತ್ತದೆ.
ಆದರೆ ಇಲ್ಲೊಂದು ಕಂಪೆನಿ ಟಾರ್ಗೆಟ್ ತಲುಪದ ನೌಕರರನ್ನು ಬಹಳ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಹೇಳಲಾದ ವಿಡಿಯೋ ಮತ್ತು ಫೋಟೋ ವೈರಲ್ ಆಗಿದೆ. ಅವರಿಗೆ ಇಲ್ಲಿ ದೈಹಿಕ ಮತ್ತು ಮಾನಸಿಕವಾಗಿ ದೌರ್ಜನ್ಯ ನೀಡಲಾಗಿದೆ. ಅವರ ಕುತ್ತಿಗೆಗೆ ಸರಪಳಿ ಬಿಗಿದು ಮಂಡಿ ಮೇಲೆ ನಾಯಿಗಳಂತೆ ತೆವಳುವ ಮತ್ತು ನೆಲದ ಮೇಲೆ ಬಿದ್ದ ನಾಣ್ಯಗಳನ್ನು ನೆಕ್ಕುವ ಶಿಕ್ಷೆ ವಿಧಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಕಾರ್ಮಿಕ ಇಲಾಖೆ ಕಂಪೆನಿಯ ವಿರುದ್ಧ ತನಿಖೆಗೆ ಆದೇಶಿಸಿದೆ.
ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಕಂಪೆನಿಯ ಗುರಿಗಳನ್ನು ಸಾಧಿಸುವಲ್ಲಿ ವಿಫಲರಾದವರಿಗೆ ಆಡಳಿತ ಮಂಡಳಿ ಅಂತಹ ಶಿಕ್ಷೆಗಳನ್ನು ನೀಡುತ್ತದೆ ಎಂದು ಕೆಲವು ಉದ್ಯೋಗಿಗಳು ತಿಳಿಸಿದ್ದಾರೆ. ಆದರೆ ಈ ಹಿಂದೆ ಆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯವಸ್ಥಾಪಕರೊಬ್ಬರು ಟಾರ್ಗೆಟ್ ತಲುಪದ ಉದ್ಯೋಗಿಗಳಿಗೆ ಈ ರೀತಿ ನಡೆಸಿಕೊಂಡಿದ್ದರು. ಅವರನ್ನು ಕಂಪೆನಿಯಿಂದ ವಜಾಗೊಳಿಸಲಾಗಿದೆ. ಅದೇ ಸಿಟ್ಟಿಗೆ ಕಂಪೆನಿಗೆ ಕೆಟ್ಟ ಹೆಸರು ಈಗ ಹಳೆಯ ವಿಡಿಯೋ ವೈರಲ್ ಮಾಡಿದ್ದಾರೆ ಎಂದು ಇನ್ನೊರ್ವ ಉದ್ಯೋಗಿ ಹೇಳಿದ್ದಾರೆ.
ಈ ಘಟನೆ ಕುರಿತು ಕಾರ್ಮಿಕ ಸಚಿವ ಶಿವನ್ ಕುಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತನಿಖೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ತಿಳಿಸಿದ್ದಾರೆ.
Leave A Reply