5 ವರ್ಷಗಳಲ್ಲಿ 400 ಕೋಟಿ ರೂ ತೆರಿಗೆ ಕಟ್ಟಿದ ರಾಮಜನ್ಮಭೂಮಿ ಟ್ರಸ್ಟ್!

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಭವ್ಯ ರಾಮ ಮಂದಿರದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಲ್ಲಿಯ ತನಕ ಐದು ವರ್ಷಗಳಲ್ಲಿ 400 ಕೋಟಿ ರೂಪಾಯಿ ತೆರಿಗೆ ಕಟ್ಟುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಭಾರತ ಮತ್ತು ವಿದೇಶದಲ್ಲಿರುವ ಸನಾತನ ಧರ್ಮದ ಅನುಯಾಯಿಗಳ ಶ್ರದ್ಧಾಕೇಂದ್ರವಾಗಿರುವ ಅಯೋಧ್ಯೆ ಕೋಟ್ಯಾಂತರ ಭಕ್ತರನ್ನು ಆಕರ್ಷಿಸುತ್ತಾ, ಭಕ್ತರ ನಂಬಿಕೆ, ವಿಶ್ವಾಸಗಳ ಮೂಲಕೇಂದ್ರವಾಗಿ ಬೆಳಗುತ್ತಿದೆ. ಇಲ್ಲಿ ಭಕ್ತರಿಂದ ಹರಿದು ಬರುತ್ತಿರುವ ದೇಣಿಗೆ, ಕಾಣಿಕೆ, ಸೇವೆಗಳಿಂದ ಟ್ರಸ್ಟ್ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಈ ನಡುವೆ 2020 ಫೆಬ್ರವರಿ 5 ರಿಂದ 2025 ಫೆಬ್ರವರಿ 5 ರವರೆಗೆ ಟ್ರಸ್ಟ್ ಕಟ್ಟಿರುವ ತೆರಿಗೆ ಹಣ 400 ಕೋಟಿ ರೂಪಾಯಿ ಎಂದು ಟ್ರಸ್ಟ್ ಸೆಕ್ರೆಟರಿ ಚಂಪತ್ ರಾಯ್ ಹೇಳಿದ್ದಾರೆ.
ಇದರಲ್ಲಿ 270 ಕೋಟಿ ರೂಪಾಯಿಗಳನ್ನು ಜಿಎಸ್ ಟಿ ರೂಪದಲ್ಲಿ ಮತ್ತು ಇತರ 130 ಕೋಟಿ ರೂಪಾಯಿಗಳನ್ನು ವಿವಿಧ ತೆರಿಗೆಯಡಿ ಕಟ್ಟಲಾಗಿದೆ. ಇತರ ತೆರಿಗೆಗಳ ಪಟ್ಟಿಯಲ್ಲಿ 39 ಕೋಟಿ ರಾಯಲ್ಟಿ, 7.4 ಕೋಟಿ ಕಾರ್ಮಿಕ ನಿಧಿ, ನಾಲ್ಕು ಕೋಟಿ ಇನ್ಸೂರೆನ್ಸ್ ಪಾಲಿಸಿಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣದ ಬಳಿಕ ಆ ಊರು ಬಹುದೊಡ್ಡ ಪ್ರವಾಸಿ ತಾಣವಾಗಿಯೂ ಬದಲಾಗಿದೆ. ಇದರಿಂದ ಸ್ಥಳೀಯರಿಗೆ ದೊಡ್ಡ ಮಟ್ಟದಲ್ಲಿ ಉದ್ಯೋಗಾವಕಾಶ ಕೂಡ ಲಭ್ಯವಾಗಿದೆ. ಇತ್ತೀಚೆಗೆ ಪ್ರಯಾಗರಾಜ್ ನಲ್ಲಿ ನಡೆದ ಮಹಾಕುಂಭದ ಅವಧಿಯಲ್ಲಿ ಅಯೋಧ್ಯೆಗೆ ಭೇಟಿ ನೀಡಿದ ಭಕ್ತರ ಸಂಖ್ಯೆ 1.26 ಕೋಟಿ.
ಇನ್ನು ಕಳೆದ ಶೈಕ್ಷಣಿಕ ವರ್ಷದಲ್ಲಿ 16 ಕೋಟಿ ಜನರು ಅಯೋಧ್ಯೆಗೆ ಆಗಮಿಸಿದ್ದಾರೆ. ಅದರಲ್ಲಿ ಐದು ಕೋಟಿ ಜನರು ರಾಮ ಮಂದಿರಕ್ಕೆ ಬಂದು ದೇವರ ದರ್ಶನ ಮಾಡಿದ್ದಾರೆ. ಟ್ರಸ್ಟಿನ ಆರ್ಥಿಕ ವ್ಯವಹಾರಗಳನ್ನು ಸಿಎಜಿ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ರಾಯ್ ಮಾಹಿತಿ ನೀಡಿದರು. ಇನ್ನು ಟ್ರಸ್ಟ್ 5 ಕೋಟಿ ರೂಪಾಯಿಯನ್ನು ಜಾಗದ ನೋಂದಣಿ, ಮ್ಯಾಪ್ ಕ್ಲಿಯರೆನ್ಸ್, ಕಂದಾಯ ತೆರಿಗೆ ಹಾಗೂ ಇತರ ವಿಷಯಗಳಿಗಾಗಿ ಖರ್ಚು ಮಾಡಲಾಗಿದೆ. ಅದರೊಂದಿಗೆ ಹತ್ತು ಕೋಟಿ ರೂಪಾಯಿಗಳನ್ನು ವಿದ್ಯುತ್ ಬಿಲ್, ದೇವಳದ ಮೂಲಭೂತ ಅಗತ್ಯ ಖರ್ಚುಗಳಿಗಾಗಿ ವ್ಯಯಿಸಲಾಗಿದೆ. ಒಟ್ಟಿನಲ್ಲಿ ರಾಮ ಮಂದಿರದ ನಿರ್ಮಾಣದಿಂದಾಗಿ ಉತ್ತರ ಪ್ರದೇಶ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರತ್ಯಕ್ಷ, ಪರೋಕ್ಷವಾಗಿ ಆದಾಯವನ್ನು ಗಳಿಸುತ್ತಿವೆ.
Leave A Reply