ರ್ಯಾಲಿ ನಡೆದರೂ, ನಿಂತರೂ ಬಿಜೆಪಿಗೇ ಲಾಭ!
ರಾಜ್ಯದಲ್ಲಿ ನಿರಂತರ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಹಾಗೂ ಪಿಎಫ್‌ಐ, ಎಸ್‌ಡಿಪಿಐ, ಕೆಎಫ್‌ಡಿ ಸಂಘಟನೆ ನಿಷೇಧಿಸಲು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ನಡೆಸಲು ಉದ್ದೇಶಿಸಿರುವ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ರಾಜ್ಯಸರಕಾರ ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ಪ್ರಯತ್ನ ಪಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಅದಕ್ಕೆ ಪೂರಕವಾಗಿ ನಿನ್ನೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಪತ್ರಿಿಕಾ ಘೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಸರಕಾರ ಜಾಥಾಗೆ ಅನುಮತಿ ನೀಡಲು ಮೀನಮೇಷ ಎಣಿಸುತ್ತಿದೆ, ಅನುಮತಿ ನೀಡಲಾಗಿದೆ ಎಂದೂ ಹೇಳಿಲ್ಲ ನಿರಾಕರಣೆಯನ್ನೂ ಮಾಡಿಲ್ಲ, ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಿದರೂ ಕೂಡ ಪ್ರತಿಭಟನೆ ಹಾಗೂ ರ್ಯಾಲಿ ನಡೆಸಿಯೇ ಸಿದ್ಧ ಎಂದು ಹೇಳಿದ್ದಾರೆ.
ಯಾರಿಗೆ ಲಾಭ ಯಾರಿಗೆ ನಷ್ಟ?
ಪ್ರತಿಭಟನೆ ಒತ್ತಾಯಪೂರ್ವಕವಾಗಿ ನಿಲ್ಲಿಸಲು ಪ್ರಯತ್ನಿಸಿದರೆ ಬಿಜೆಪಿ ಕಾರ್ಯಕರ್ತರ ವಾಹನಗಳ ಪೆಟ್ರೋಲೂ ಉಳಿಯುತ್ತದೆ, ರಾಜಕೀಯವಾಗಿ ಮೈಲೇಜೂ ಸಿಗುತ್ತದೆ. ರಾಜ್ಯ ಸರಕಾರ ಪ್ರತಿಭಟನೆ ಹತ್ತಿಕ್ಕಲು ಯಶಸ್ವಿಯಾದರೂ ರಾಜಕೀಯವಾಗಿ ನಷ್ಟವಾಗುವುದಂತೂ ಖಂಡಿತ. ಸಂಸದರಾದ ಪ್ರತಾಪ್ ಸಿಂಹ ಹಾಗೂ ನಳಿನ್ ಕುಮಾರ್ ಕಟೀಲ್ ನಿಲುವು ನೋಡಿದಾಗ ಕೊನೆಕ್ಷಣದಲ್ಲಿ ಸಿದ್ದರಾಮಯ್ಯ ಸರಕಾರ ಪ್ರತಿಭಟನೆ ತಡೆಯುವ ಕಾರ್ಯತಂತ್ರ ರೂಪಿಸಿದರೆ ಅದಕ್ಕೆ ಪ್ರತಿಯಾಗಿ ತಂತ್ರಗಾರಿಕೆ ಮೂಲಕ ಪ್ರತಿಭಟನೆ ರೂಪುರೇಷೆಗಳನ್ನು ಮೊದಲೇ ತಯಾರು ಮಾಡಿದಂತಿದೆ. ಆ ಮೂಲಕ ಯಾವ ಸನ್ನಿವೇಶ ಎದುರಾದರೂ ಪ್ರತಿಭಟನೆ ನಡೆಸಿಯೇ ತೀರುತ್ತೇವೆ ಎಂಬ ಪಣ ತೊಟ್ಟಂತಿದೆ.
ರಾಜ್ಯಸರಕಾರ ಏನು ಮಾಡಬಹುದು?
ರಾಜ್ಯ ಸರಕಾರವು ಅನುಮತಿ ನೀಡದೇ ಇರುವ ನೆಪ ಒಡ್ಡಿ ರ್ಯಾಲಿ ಮಂಗಳೂರು ತಲುಪುವ ಮೊದಲೇ ದಾರಿಯಲ್ಲಿ ತಡೆಯಲು ಯತ್ನಿಸಬಹುದು. ಗ್ರಹ ಮಂತ್ರಿಗಳ ಮೂಲಕ ಹೇಳಿಕೆ, ಎಚ್ಚರಿಕೆ ನೀಡಿ ಪ್ರತಿಭಟನೆ ಯಶಸ್ವಿಯಾಗದಂತೆ ನೋಡಿಕೊಳ್ಳಬಹುದು. ಹಿಂದಿನ ದಿನವೇ ರಾಜ್ಯದ ಮೂಲೆಗಳಿಂದ ಮಂಗಳೂರು ತಲುಪುವ ದಾರಿಯಲ್ಲಿ ಅಲ್ಲಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಏರ್ಪಡಿಸಿ ಕಾರ್ಯಕರ್ತರಲ್ಲಿ ಭಯದ ವಾತಾವಾರಣ ನಿರ್ಮಾಣ ಮಾಡಬಹುದು. ಅಥವಾ ಪ್ರತಿರೋಧ ವ್ಯಕ್ತಪಡಿಸದೇ ಪ್ರತಿಭಟನೆಗೆ ಅವಕಾಶವನ್ನೂ ನೀಡಬಹುದು.
ಅವಕಾಶ ನೀಡದೇ ಇದ್ದ ಪಕ್ಷ ಬಿಜೆಪಿ ಏನು ಮಾಡಬಹುದು?
ರಾಜ್ಯ ಮೂಲೆ ಮೂಲೆಗಳಿಂದಲೂ ಕಾರ್ಯಕರ್ತರು ಮಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಮಂಗಳೂರು ಹೊರವಲಯದಲ್ಲಿಯೇ ರ್ಯಾಲಿ ತಡೆದರೆ ಅದೇ ಸ್ಥಳದಲ್ಲಿ ಧ್ವನಿವರ್ಧಕ ಇಟ್ಟು ಸಭೆ ಮಾಡಬಹುದು. ಬಂಧನ ವಿರೋಧಿಸಿ ಪ್ರತಿರೋಧ ಮಾಡಬಹುದು. ಮಂಗಳೂರು ಹೊರಗೆ ಪ್ರತಿಭಟನೆ ತಡೆದರೂ ನಗರದಲ್ಲಿ ಬ್ರಹತ್ ಪ್ರತಿಭಟನೆ ಮೂಲಕ ರಾಜ್ಯಸರಕಾರದ ದಮನ ನೀತಿ ಖಂಡಿಸಿ ಉಗ್ರ ಹೋರಾಟ ಮಾಡಬಹುದು. ಪ್ರತಿಭಟನೆ ಹತ್ತಿಕ್ಕಿದ್ದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಿ ಮೈಲೇಜ್ ಗಳಿಸಬಹುದು.
ಒಟ್ಟಿನಲ್ಲಿ ಮಂಗಳೂರು ಚಲೋ ಬೈಕ್ ರ್ಯಾಲಿ ಬಿಜೆಪಿಗಂತೂ ಲಾಭ. ಕಾಂಗ್ರೆಸ್ಸಿಗೆ ಪ್ರತಿಭಟನೆ ನಿಲ್ಲಿಸಿದರೂ ಕಷ್ಟ, ಅನುಮತಿ ನೀಡಿದರೂ ಕಷ್ಟ ಎಂಬ ಧರ್ಮ ಸಂಕಟ. ಮಂಗಳೂರು ಚಲೋ ಕಾಂಗ್ರೆಸ್ಸನ್ನು ಕರ್ನಾಟಕ್ ಸೇ ಚಲೋ ಮಡುತ್ತದೆಯೋ ಎಂದು ಕಾದುನೋಡಬೇಕಾಗಿದೆ.
Leave A Reply