ನಂದಿನಿ ನದಿ ಮಾಲಿನ್ಯ ಮಾಡುವವರಿಗೆ ಕಾದಿದೆ ಶಿಕ್ಷೆ: ಉಳ್ಳಾಯ ದೈವ ಅಭಯ

ನಂದಿನಿ ನದಿ ನೀರನ್ನು ಮಾಲಿನ್ಯ ಮಾಡುವವರಿಗೆ ಸೂಕ್ತ ಶಿಕ್ಷೆ ವಿಧಿಸುವುದಾಗಿ ಚೇಳ್ಯಾರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವ ಭರವಸೆ ನೀಡಿದೆ. ನದಿಯ ಮಾಲಿನ್ಯದಿಂದಾಗಿ ಸಾಂಪ್ರದಾಯಿಕ ಮೀನು ಹಿಡಿಯುವ ಜಾತ್ರೆಗೆ ಅಡ್ಡಿಯಾಗಿದೆ ಎಂದು ಭಕ್ತರು ದೈವದಲ್ಲಿ ನಿವೇದಿಸಿದ್ದರು. ಈ ಅಭಯ ದೊರಕಿದ್ದು ಚೇಳ್ಯಾರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ಪರಿವಾರ ದೈವಗಳ ನೇಮೋತ್ಸವ ಸಂದರ್ಭದಲ್ಲಿ.
ಖಂಡಿಗೆ ಚೇಳ್ಯಾರು ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆ ಸಂದರ್ಭ ಸಂಪ್ರದಾಯದಂತೆ ಮೀನು ಹಿಡಿಯುವ ಕಾರ್ಯಕ್ರಮ ಜರಗುತ್ತದೆ. ಸದ್ಯ ನಂದಿನಿ ನದಿಯಲ್ಲಿ ತ್ಯಾಜ್ಯ ನೀರು ಹರಿಯುವುದರ ಜೊತೆಗೆ ಕಳೆ ಸಿಕ್ಕಾಪಟ್ಟೆ ತುಂಬಿರುವುದರಿಂದ ಮೀನು ಹಿಡಿಯಲು ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ನದಿಯಲ್ಲಿ ಮೀನಿನ ಸಂತತಿ ಕೊರತೆ ಕಂಡು ಬಂದಿದ್ದು, ಇದೇ ರೀತಿ ಮುಂದುವರೆದಲ್ಲಿ ಭವಿಷ್ಯದಲ್ಲಿ ಈ ಸಂಪ್ರದಾಯವೇ ನಾಶವಾಗುವ ಆತಂಕವಿದೆ.
ಈ ಹಿನ್ನಲೆಯಲ್ಲಿ ಈ ಬಾರಿ ದೈವಗಳ ನೇಮೋತ್ಸವ ಸಂದರ್ಭ ನಂದಿನಿ ನದಿ ಮಾಲಿನ್ಯದಿಂದ ಜಾತ್ರೆ ಪ್ರಯುಕ್ತ ಖಂಡಿಗೆ ಮೀನು ಹಿಡಿಯುವ ಕಾರ್ಯಕ್ರಮ ನಿಂತು ಹೋಗುವ ಪರಿಸ್ಥಿತಿ ಬಂದಿರುವ ಬಗ್ಗೆ ಆಡಳಿತ ಸಮಿತಿ, ನಂದಿನಿ ನದಿ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ದೈವದಲ್ಲೇ ನಿವೇದಿಸಿದ್ದರು.
ಈ ಬಗ್ಗೆ ಅಭಯ ನೀಡಿದ ಉಳ್ಳಾಯ ದೈವ, ತನ್ನ ಸವಾರಿಯ ನಂದಿನಿ ನದಿ ಉಳಿಸಿಯೇ ಸಿದ್ಧ, ನದಿಯನ್ನು ಮಾಲಿನ್ಯ ಮಾಡಿದವರಿಗೆ ತಕ್ಕ ಶಾಸ್ತ್ರಿ ಮಾಡುತ್ತೇನೆ ಎಂದು ಅಭಯ ನೀಡಿದೆ.
ಕಳೆದ ವರ್ಷ ಕೂಡ ಈ ಬಗ್ಗೆ ಪ್ರಮುಖರು ದೈವಕ್ಕೆ ಮೊರೆ ಹೋಗಿದ್ದು, ನಂದಿನಿ ನದಿ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಲೋಕಾಯುಕ್ತರು ಭೇಟಿ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಿದ್ದರು.
Leave A Reply