RSS ಕಚೇರಿ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್.. ಅಬು ಸೈಫುಲ್ಲಾ ಹತ್ಯೆ!

ಆರ್ ಎಸ್ ಎಸ್ ಕಚೇರಿ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್… ಅಬು ಸೈಫುಲ್ಲಾ ಹತ್ಯೆಗೆ ಬೆಚ್ಚಿಬಿದ್ದ ಪಾಕಿಸ್ತಾನ!
ಈ ಉಗ್ರರ ಮುಖಂಡನನ್ನು ಯಾರಾದರೂ ಕೊಲ್ಲುತ್ತಾರೆ ಎಂದು ಪಾಕಿಸ್ತಾನದಲ್ಲಿ ಆತನ ಸುತ್ತಲೂ ಕೋಟೆ ಕಟ್ಟಿಕೊಂಡವರಿಗೆ ಒಂದು ಸಣ್ಣ ಅನುಮಾನವೂ ಇರಲಿಲ್ಲ. ಯಾಕೆಂದರೆ ಆತ ಲಷ್ಕರೆ ತೈಬಾದ ಮಾಸ್ಟರ್ ಮೈಂಡ್ ಆಗಿದ್ದ. ಅವನನ್ನು ಅಬು ಸೈಫುಲ್ಲಾ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಬೇರೆ ಬೇರೆ ದೇಶಗಳಲ್ಲಿ ಇರುವಾಗ ಅವನು ತನ್ನ ಹೆಸರನ್ನು ಬದಲಿಸುತ್ತಾ ಇರುತ್ತಿದ್ದ. ನೇಪಾಳದಲ್ಲಿ ಇದ್ದಾಗ ವಿನೋದ್ ಕುಮಾರ್ ಎನ್ನುವ ಹೆಸರಿನ ಪಾಸ್ ಪೋರ್ಟ್ ಹೊಂದಿದ್ದ. ಅಲ್ಲಿಯೇ ನಾಗ್ಮಾ ಬಾನು ಎನ್ನುವ ಸ್ಥಳೀಯ ಮಹಿಳೆಯನ್ನು ಮದುವೆಯಾಗಿದ್ದ. ನೇಪಾಳದಲ್ಲಿ ಕುಳಿತುಕೊಂಡೇ ಭಾರತದಲ್ಲಿ ದಾಳಿ ನಡೆಸಲು ಸಂಚು ಹೂಡಿದ್ದ.
ರಝಾವುಲ್ಲಾ ನಿಝಾಮಾನಿ ಯಾನೆ ಅಬು ಸೈಫುಲ್ಲಾ 2006 ರಲ್ಲಿ ನಾಗ್ಪುರದ ಆರ್ ಎಸ್ ಎಸ್ ಕಚೇರಿ ಮೇಲೆ ನಡೆದ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಅದರ ಹಿಂದಿನ ವರ್ಷ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಮೇಲೆ ನಡೆಸಿದ ಉಗ್ರ ದಾಳಿ ಹಾಗೂ 2001 ರಲ್ಲಿ ರಾಂಪುರದ ಸಿಆರ್ ಪಿಎಫ್ ಮೇಲೆ ನಡೆಸಿದ ಉಗ್ರ ದಾಳಿಯಲ್ಲಿಯೂ ಇವನದ್ದೇ ಪ್ರಮುಖ ಪಾತ್ರವಿತ್ತು. ಆದ್ದರಿಂದ ಈತ ಭಾರತಕ್ಕೆ ಅತ್ಯವಶ್ಯಕವಾಗಿ ಬೇಕಾಗಿದ್ದ. ಈ ಉಗ್ರನನ್ನು ಸಿಂಧ್ ಪ್ರಾಂತ್ಯದಲ್ಲಿ ಅಪರಿಚಿತರು ಹತ್ಯೆ ಮಾಡಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಿಂದ ರಜಾವುಲ್ಲಾ ಸಿಂಧ್ ನ ಮಾಟ್ಲಿಗೆ ಸ್ಥಳಾಂತರಗೊಂಡಿದ್ದ. ಲಷ್ಕರ್ ಹಾಗೂ ಅದರ ಮುಂಚೂಣಿ ಸಂಘಟನೆಯಾದ ಜಮಾತ್- ಉದ್- ದಾವಾಕ್ಕಾಗಿ ಆತ ಕೆಲಸ ಆರಂಭಿಸಿದ್ದ. ಈ ಎರಡು ಉಗ್ರ ಸಂಘಟನೆಯನ್ನು ವಿಶ್ವಸಂಸ್ಥೆ ನಿಷೇಧಿಸಿದೆ. ಮುಂದಿನ ಉಗ್ರ ಕಾರ್ಯಾಚರಣೆಗಾಗಿ ನೇಮಕಾತಿ ಮತ್ತು ನಿಧಿ ಸಂಗ್ರಹಣೆಯ ಮೇಲೆ ಅವರ ಗಮನವಿತ್ತು.
ಕಳೆದ ವರ್ಷ ಪಾಕಿಸ್ತಾನದ ಐವತ್ತಕ್ಕೂ ಹೆಚ್ಚಿನ ಉಗ್ರರು ಅನಾಮಧೇಯ ಶೂಟರ್ ಗಳಿಂದ ಹತರಾಗಿದ್ದರು. ಆ ನಂತರ ಕೆಲವು ತಿಂಗಳು ಅನಾಮಧೇಯ ಶೂಟರ್ ಗಳ ಸುಳಿವಿರಲಿಲ್ಲ. ಈಗ ಮತ್ತೆ ಅನಾಮಧೇಯರು ಕಣಕ್ಕೆ ಇಳಿದಿದ್ದಾರೆ. ಭಾರತೀಯ ಸೇನೆ ಒಂದು ಕಡೆ ಉಗ್ರರ ನಾಶದಲ್ಲಿ ನಿರತರಾಗಿದ್ದರೆ, ಇನ್ನೊಂದೆಡೆ ಈ ಅನಾಮಧೇಯ ಶೂಟರ್ ಗಳು ಉಗ್ರರನ್ನು ಅವರ ಬಿಲಗಳಲ್ಲಿ ಮುಗಿಸುತ್ತಿದ್ದಾರೆ.
Leave A Reply