ಧರ್ಮಸ್ಥಳದ ಆಕಾಂಕ್ಷ ಆತ್ಮಹತ್ಯೆಯ ಬಗ್ಗೆ ಅನುಮಾನ ಎಂದ ಹೆತ್ತವರು!

ಕೈಯಲ್ಲಿ ಕಾಲೇಜಿನ ಪ್ರಮಾಣಪತ್ರಗಳನ್ನು ಹಿಡಿದುಕೊಂಡು ಹೆತ್ತವರಿಗೆ ಫೋನ್ ಮಾಡಿ ಮಾತನಾಡಿದ 22 ವಯಸ್ಸಿನ ಯುವತಿ ಕೆಲವೇ ಕ್ಷಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಆಕೆಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆಕೆಯ ಹೆಸರು ಆಕಾಂಕ್ಷ. ಸುರೇಂದ್ರ ಹಾಗೂ ಸಿಂಧೂ ದೇವಿಯವರ ಮಗಳು. ಊರು ಕರ್ನಾಟಕದ ಬೆಳ್ತಂಗಡಿಯ ಧರ್ಮಸ್ಥಳದ ಬೋಳಿಯೂರು. ಆಕೆ ಮೇ 17 ರಂದು ಪಂಜಾಬಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾಳೆ.
ಆಕಾಂಕ್ಷ ಎಸ್ ನಾಯರ್ ಏರೋಸ್ಪೇಸ್ ಇಂಜಿನಿಯರ್. ಆರು ತಿಂಗಳಿನಿಂದ ದೆಹಲಿಯ ಸ್ಪೈಸ್ ಜೆಟ್ ಏರೋಸ್ಪೇಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಅವಳಿಗೆ ಹೆಚ್ಚಿನ ಉದ್ಯೋಗಾವಕಾಶದ ಬಾಗಿಲು ತೆರೆದಿತ್ತು. ಅದಕ್ಕಾಗಿ ಕೆಲವು ದಾಖಲೆಗಳನ್ನು ಕಾಲೇಜಿನಿಂದ ಪಡೆಯಬೇಕಿತ್ತು. ಅದಕ್ಕಾಗಿ ತಾನು ಕಲಿತ ಪಂಜಾಬಿನ ಲವ್ಲಿ ಪ್ರೋಫೆಷನಲ್ ವಿಶ್ವವಿದ್ಯಾನಿಲಯಕ್ಕೆ ತೆರಳಿದ್ದಳು. ಅಲ್ಲಿ ಪ್ರಮಾಣಪತ್ರಗಳನ್ನು ಪಡೆದಿದ್ದಾಳೆ. ನಂತರ ಹೆತ್ತವರೊಂದಿಗೆ ಮಾತನಾಡಿದ್ದಾಳೆ. ನಂತರ ಏಕಾಏಕಿ ಕಾಲೇಜಿನ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇಲ್ಲಿ ಹೆತ್ತವರೊಂದಿಗೆ ಮಾತನಾಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಸುಳಿವೂ ಆಕೆಯ ಮನೆಯವರಿಗೆ ಸಿಕ್ಕಿರಲಿಲ್ಲ. ಅದರೆ ಆ ಫೋನ್ ಕರೆ ಮತ್ತು ಆತ್ಮಹತ್ಯೆಯ ನಡುವೆ ಏನು ಆಯಿತು ಎನ್ನುವುದೇ ಈಗ ತನಿಖೆ ಆಗಬೇಕಾದ ಸಂಗತಿ. ಸದ್ಯ ಪೊಲೀಸರು ಆಕೆ ಕಲಿತ ಕಾಲೇಜಿನ ಪ್ರೋಫೆಸರ್ ಮ್ಯಾಥ್ಯೂ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ಎನ್ನುವ ಕೇಸನ್ನು ಯುವತಿಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ದಾಖಲಿಸಿದ್ದಾರೆ.
ಅಷ್ಟಕ್ಕೂ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್ ಮ್ಯಾಥ್ಯೂಗೂ ಈ ಕೇಸಿಗೂ ಸಂಬಂಧ ಏನು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಬಿಜಿಲ್ ಮ್ಯಾಥ್ಯೂಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆತನಿಗೂ, ಈಕೆಗೂ ಲವ್ ಎಫೇರ್ ಇತ್ತಾ? ತನ್ನನ್ನು ಮದುವೆಯಾಗು ಎಂದು ಆತನ ಮನೆಗೆ ಹೋಗಿ ಈಕೆ ರಂಪಾಟ ಮಾಡಿದ್ದಳಾ? ಕಾಲೇಜಿನಲ್ಲಿಯೂ ಇವರಿಬ್ಬರ ನಡುವೆ ಅದೇ ವಿಷಯಕ್ಕೆ ಮೊನ್ನೆ ಗಲಾಟೆಯಾಯಿತಾ? ಇದೆಲ್ಲವೂ ತನಿಖೆಯಿಂದ ಸಾಬೀತಾಗಬೇಕು. ಇನ್ನೊಂದೆಡೆ ಆತ ಈಕೆಯನ್ನು ಬಲವಂತವಾಗಿ ಪೀಡಿಸುತ್ತಿದ್ದಾನಾ ಎನ್ನುವುದು ಕೂಡ ತನಿಖೆಯಿಂದಲೇ ಹೊರಬೀಳಬೇಕಾಗಿದೆ. ಇದು ಪ್ರೇಮ ವೈಫಲ್ಯದ ಪ್ರಕರಣವೋ ಅಲ್ಲವೋ ಎಂದು ಗೊತ್ತಾದ ನಂತರವೇ ಸತ್ಯಾಸತ್ಯತೆ ಹೊರಬೀಳಲಿದೆ.
ಸದ್ಯ ಆಕೆಯ ಮೃತದೇಹವನ್ನು ಹೆತ್ತವರಿಗೆ ಹಸ್ತಾಂತರಿಸಲಾಗಿದ್ದು, ಧರ್ಮಸ್ಥಳದ ಬೊಳಿಯೂರು ಮನೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
Leave A Reply