ಭಯೋತ್ಪಾದಕತೆಯ ವಿರುದ್ಧ ವಿದೇಶಕ್ಕೆ ತೆರಳುವ ಭಾರತದ ನಿಯೋಗದಲ್ಲಿ ಓವೈಸಿ! ಹೇಳಿದ್ದೇನು?

ಸಂಸದ ಅಸಾದುದ್ದೀನ್ ಓವೈಸಿ ಭಾರತದಿಂದ ವಿದೇಶದ ವಿವಿಧ ರಾಷ್ಟ್ರಗಳಿಗೆ ತೆರಳುವ ಏಳು ನಿಯೋಗಗಳ ಪೈಕಿ ಒಂದರಲ್ಲಿ ಸ್ಥಾನ ಪಡೆದಿದ್ದಾರೆ. ಕೇಂದ್ರ ಸರಕಾರ ಸರ್ವ ಪಕ್ಷಗಳನ್ನು ಸೇರಿಸಿ ಏಳು ನಿಯೋಗಗಳನ್ನು ರಚಿಸಿದೆ. ಅದರಲ್ಲಿ ಓವೈಸಿಗೂ ಸ್ಥಾನ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹೈದ್ರಾಬಾದ್ ಸಂಸದ ಓವೈಸಿ, ನಾನು ನನ್ನ ಪಕ್ಷ ಎಐಎಂಐಎಂ ಪ್ರತಿನಿಧಿಯಾಗಿ ತೆರಳುತ್ತಿಲ್ಲ. ನಾನು ಭಾರತ ದೇಶವನ್ನು ಪ್ರತಿನಿಧಿಸಲು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾನು ಪಾಕಿಸ್ತಾನದ ಷಡ್ಯಂತ್ರವನ್ನು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಮುಂದೆ ಬಿಚ್ಚಿಡಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ಭಾರತ ಇಲ್ಲಿಯ ತನಕ ಪಾಕ್ ಪ್ರಾಯೋಜಿತ ಭಯೋತ್ಪಾದನೆಯ ಕೃತ್ಯದಿಂದ ಸಾಕಷ್ಟು ತೊಂದರೆಯನ್ನು ಅನುಭವಿಸಿದೆ. ಇದೆಲ್ಲವೂ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮೊಹಮ್ಮದ್ ಜಿಯಾ ಉಲ್ ಹಕ್ ಸಮಯದಿಂದ ಆರಂಭವಾಗಿತ್ತು. ಇದು ಜಗತ್ತಿಗೆ ತಿಳಿಯಬೇಕು. ಅದರೊಂದಿಗೆ ಕಂದಹಾರ್ ವಿಮಾನ ಅಪಹರಣ, 26/11 ಮುಂಬೈ ದಾಳಿ, 2001 ಪಾರ್ಲಿಮೆಂಟ್ ದಾಳಿ, ಉರಿ ದಾಳಿ, ಪಠಾನ್ ಕೋಟ್ ದಾಳಿ, ರೇಸಿ ಮತ್ತು ಪಾಲ್ಗಾಂಮ್ ನಲ್ಲಿ ಪ್ರವಾಸಿಗರ ಹತ್ಯೆಗಳು, ಹೀಗೆ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳ ಮುಖವಾಡಗಳನ್ನು ಪ್ರಪಂಚದ ಮುಂದೆ ತೆರೆದಿಡುವ ಅವಶ್ಯಕತೆ ಇದೆ ಎಂದು ಓವೈಸಿ ಹೇಳಿದ್ದಾರೆ.
ಇನ್ನು ಪಾಕಿಸ್ತಾನ ತನ್ನನ್ನು ತಾನು ಇಸ್ಲಾಂ ರಾಷ್ಟ್ರ ಎಂದು ಬಿಂಬಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ ಓವೈಸಿ ಇದು ಶುದ್ಧ ಸೋಗಲಾಡಿತನ ಎಂದು ಹೇಳಿದ್ದಾರೆ. ನಾನು ಏಳು ನಿಯೋಗದಲ್ಲಿ ಯಾವ ನಿಯೋಗದ ಭಾಗವೆಂದಾಗಲಿ, ನಮ್ಮ ನಿಯೋಗದ ಮುಖ್ಯಸ್ಥರು ಯಾರು ಎಂದು ಯೋಚಿಸಲು ಹೋಗಿಲ್ಲ. ನಾವು ಪ್ರಪಂಚದ ಎದುರು ನಮ್ಮ ಕಥೆಯನ್ನು ಹೇಳಲೇಬೇಕಿದೆ. ಪಾಕಿಸ್ತಾನ ತನ್ನನ್ನು ತಾನು ಇಸ್ಲಾಮಿಕ್ ದೇಶ ಎಂದು ಬಿಂಬಿಸಿಕೊಳ್ಳುವ ಹತಾಶ ಪ್ರಯತ್ನ ಮಾಡುತ್ತಿದೆ. ಹಾಗೆ ನೋಡಿದರೆ ಭಾರತದಲ್ಲಿ ಸುಮಾರು 20 ಕೋಟಿ ಮುಸ್ಲಿಮರಿದ್ದಾರೆ. ಇದೆಲ್ಲವನ್ನು ನಾವು ಜಗತ್ತಿಗೆ ತಿಳಿಸಬೇಕಿದೆ ಎಂದು ಓವೈಸಿ ಹೇಳಿದ್ದಾರೆ.
Leave A Reply