ಬೆಂಗಳೂರಿನ ಹಲವೆಡೆ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು.. ಇದು ಹೊಸದಲ್ಲ – ಡಿಕೆಶಿ

ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಮಳೆಯ ಅವಾಂತರ ಹೇಗಿದೆ ಎಂದರೆ ರಸ್ತೆಗಳೇ ನದಿಗಳಂತಾಗಿವೆ. ನೀರು ಮನೆ, ಕಟ್ಟಡಗಳ ಒಳಗೆ ನುಗ್ಗಿದೆ. ತಾತ್ಕಾಲಿಕ ಬೋಟ್ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಅರ್ಧದಷ್ಟು ಮುಳುಗಿದ ದೃಶ್ಯಗಳು ಅನೇಕ ಕಡೆ ಸಾಮಾನ್ಯವಾಗಿದೆ. ನೀರು ಸರಿಯಾಗಿ ಹರಿಯಲು ವ್ಯವಸ್ಥೆ ಇಲ್ಲದೆ ಜನ ಪರದಾಡುತ್ತಿದ್ದಾರೆ. ಇಷ್ಟಾಗಿಯೂ ಇದೇನೂ ಹೊಸದಲ್ಲ. ಇದಕ್ಕೆ ಶಾಶ್ವತ ಪರಿಹಾರ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಣ್ಣಗಿನ ಉತ್ತರ ನೀಡಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ ಕೆ ಶಿವಕುಮಾರ್ ಅವರು ಈ ಬಗ್ಗೆ ತಮ್ಮ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ. ನಾವು ಬೆಂಗಳೂರಿನ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ದಿನದ 24 ಗಂಟೆಯೂ ಈ ಬಗ್ಗೆ ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತದೆ. ಅದಕ್ಕಾಗಿ ಬಿಬಿಎಂಪಿ ವಾರ್ ರೂಂ ರಚಿಸಲಾಗಿದ್ದು, ವೈಯಕ್ತಿಕವಾಗಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಳೆಯಿಂದಾಗಿ ಆಗುತ್ತಿರುವ ತೊಂದರೆಗಳ ಬಗ್ಗೆ ಭಾರತೀಯ ಜನತಾ ಪಾರ್ಟಿ ಹಾಗೂ ಜಾತ್ಯಾತೀತ ಜನತಾದಳ ಮುಖಂಡರು ಸರಕಾರದ ವಿರುದ್ಧ ತೀವ್ರ ವಾಗ್ದಾಳಿಯನ್ನು ಮಾಡಿದ ನಂತರ ಡಿಕೆಶಿವಕುಮಾರ್ ತಮ್ಮ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಳೆಯ ನೀರು ಸಮರ್ಪಕವಾಗಿ ಹರಿದು ಹೋಗಲು ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಅತಿಕ್ರಮಣದಿಂದ ಆಗಿರುವ ತೊಂದರೆಗಳಿಂದ ಹೈರಾಣರಾಗಿರುವ ನಾಗರಿಕರ ಸ್ಥಿತಿಗತಿಗಳ ಬಗ್ಗೆ ಜನಸಾಮಾನ್ಯರ ಆಕ್ರೋಶ ಮತ್ತು ವಿಪಕ್ಷಗಳ ಮಾತಿನೇಟಿಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿಕೆಶಿ ” ಈಗ ಬೆಂಗಳೂರು ಅನುಭವಿಸುತ್ತಿರುವ ಸಂಕಷ್ಟ ಹೊಸದೇಲ್ಲ. ಈ ಸಮಸ್ಯೆಯನ್ನು ಹಿಂದಿನ ಆಡಳಿತ ಮತ್ತು ಸರಕಾರಗಳು ನಿರ್ಲಕ್ಷ್ಯ ವಹಿಸಿದ ಕಾರಣದಿಂದ ಈ ಪರಿಸ್ಥಿತಿ ಉದ್ಭವವಾಗಿದೆ. ಇದಕ್ಕೆ ನಾವು ಶಾಶ್ವತ ಪರಿಹಾರ ಹುಡುಕಿ ಸರಿಪಡಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
“ನನ್ನ ಸಹ ಬೆಂಗಳೂರಿಗರೇ, ನಾನು ನಿಮ್ಮೊಂದಿಗೆ ಒಬ್ಬನಾಗಿದ್ದೇನೆ. ನಾನು ನಿಮ್ಮ ಸಮಸ್ಯೆ ಮತ್ತು ಆಕ್ರೋಶವನ್ನು ಅರ್ಥ ಮಾಡಿಕೊಳ್ಳಬಲ್ಲೆ. ನಾನು ಇದನ್ನು ಪರಿಹರಿಸಲು ಪ್ರಯತ್ನಿಸುವೆ. ನಾನು ನಿಮ್ಮ ಜೊತೆ ನಿಲ್ಲುತ್ತೇನೆ” ಎಂದು ಹೇಳಿದ್ದಾರೆ.
ರಾಜ್ಯ ಸರಕಾರ ಪ್ರತಿ ಬಾರಿ ಇಂತಹ ಸಮಸ್ಯೆಯಾದಾಗ ಇದೇ ಮಾತನ್ನು ಹೇಳುತ್ತಾ ಬಂದಿರುವುದರಿಂದ ಜನರಿಗೂ ಅದೇ ರಾಗ, ಅದೇ ಹಾಡು ಅನಿಸಿದೆ. ಇನ್ನು ಹೆಚ್ಚಿನ ಬಡಾವಣೆಗಳು ಒತ್ತುವರಿಯಾಗಿ ನಿರ್ಮಾಣಗೊಂಡಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಇದು ಸಹಜ ಪ್ರಕ್ರಿಯೆ ಎಂದು ಎಲ್ಲರೂ ಒಪ್ಪಿಕೊಂಡಂತೆ ಆಗಿದೆ. ಸಮಸ್ಯೆಯಾದಾಗ ಮಾಧ್ಯಮಗಳಲ್ಲಿ ಸ್ವಲ್ಪ ಸುದ್ದಿ ಬರುತ್ತದೆ. ವಿಪಕ್ಷಗಳಲ್ಲಿ ಯಾರು ಇರುತ್ತಾರೋ ಅವರು ಸಂಪ್ರದಾಯದಂತೆ ನಾಲ್ಕು ಟೀಕೆ ಮಾಡುತ್ತಾರೆ. ಮಳೆ ಇಳಿದು ಹೋದ ನಂತರ ಬೆಂಗಳೂರೇ ಸೂಪರ್ ಎಂದುಕೊಂಡವರು ಎಲ್ಲವನ್ನು ಮರೆತು ಹೊಂದಾಣಿಕೆಯೊಂದಿಗೆ ಮುಂದುವರೆಯುತ್ತಾರೆ. ಮತ್ತೇ ಜೋರು ಮಳೆ ಬಂದಾಗ ಇದೆಲ್ಲಾ ಮತ್ತೆ ಪುನರಾವರ್ತನೆಯಾಗುತ್ತದೆ. ಇದರಲ್ಲಿ ಯಾರಿಗೂ ಹೊಸದು ಕಾಣಿಸುವುದಿಲ್ಲ ಎನ್ನುವ ಡಿಕೆಶಿಯವರ ವಾಕ್ಯದ ತಾತ್ಪರ್ಯ ನಿಜ.
Leave A Reply