ಕೂದಲು ಉದುರುವ ಸಮಸ್ಯೆ; ಮಂಗಳೂರಿನ ಯುವಕ ಆತ್ಮಹತ್ಯೆ!

ಆತ ವೃತ್ತಿಯಲ್ಲಿ ಪೇಂಟರ್. ವಯಸ್ಸು 32. ಹೆಸರು ಸುಧೀರ್. ದಕ್ಷಿಣ ಕನ್ನಡದ ಮುಡಿಪು ಸಮೀಪದ ಕುರ್ನಾಡು ಹೂವಿನಕೊಪ್ಪಲದಲ್ಲಿ ತಾಯಿಯೊಂದಿಗೆ ವಾಸವಿದ್ದ. ಇತ್ತೀಚೆಗೆ ಆತನಿಗೆ ಕೂದಲು ಉದುರುವ ಸಮಸ್ಯೆ ಆರಂಭವಾಗಿತ್ತು. ಇದರಿಂದ ತುಂಬಾ ನೊಂದುಕೊಂಡಿದ್ದ. ಇದರಿಂದ ಪಾರಾಗಲು ಆತ್ಮಹತ್ಯೆಯೊಂದೇ ದಾರಿ ಎನ್ನುವ ತಪ್ಪು ನಿರ್ಧಾರಕ್ಕೆ ಬಂದುಬಿಟ್ಟಿದ್ದ. ಅದಕ್ಕಾಗಿ ಆತ ತಾನು ಕಲಿತ ಶಾಲೆಗೆ ಬಂದಿದ್ದ.
ಆವತ್ತು ಭಾನುವಾರ. ಭಾನುವಾರ ಬೆಳಿಗ್ಗೆ ಬಸ್ಸು ತಂಗುದಾಣದಲ್ಲಿ ಕುಳಿತಿರುವುದನ್ನು ಸ್ಥಳೀಯರು ನೋಡಿದ್ದಾರೆ. ಮಗ ಮೊಬೈಲ್ ಮತ್ತು ಪರ್ಸ್ ಮನೆಯಲ್ಲಿಯೇ ಬಿಟ್ಟು ಎಲ್ಲಿಗೆ ಹೋದ ಎಂದು ತಾಯಿ ಹುಡುಕಾಡಲು ಶುರು ಮಾಡಿದ್ದರು. ಕೊನೆಗೆ ಶವ ಶಾಲೆಯ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಧೀರ್ ಸಾಯುವ ಮೊದಲು ಡೆತ್ ನೋಟ್ ಕೂಡ ಬರೆದಿಟ್ಟಿದ್ದ. ಅದರಲ್ಲಿ ತನ್ನ ಕೂದಲು ಉದುರುವ ಸಮಸ್ಯೆಯ ಬಗ್ಗೆ ಬರೆದಿದ್ದಾನೆ. ಇನ್ನು ತನ್ನ ಅಂತ್ಯದಲ್ಲಿಯೂ ಮಾನವೀಯತೆ ಮರೆಯದೇ ತನ್ನ ಕಿಡ್ನಿಯನ್ನು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಬಾವನಿಗೆ ದಾನ ಮಾಡುವಂತೆ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಈ ತಿಂಗಳ ಕೊನೆಯಲ್ಲಿ ಇವನ ಸಹೋದರನಿಗೆ ಮದುವೆ ನಿಶ್ಚಯವಾಗಿತ್ತು. ಈತ ಕುರ್ನಾಡು ಶ್ರೀ ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ. ಅದೇ ಶಾಲೆಯಲ್ಲಿ ಕಲಿತವ ಅದೇ ಶಾಲೆಯಲ್ಲಿ ಅಂತ್ಯಕಂಡಿದ್ದಾನೆ. ಶ್ರೀ ದತ್ತಾತ್ರೇಯ ಭಜನಾ ಮಂಡಳಿ ಹಾಗೂ ಯಕ್ಷಗಾನ ಸಂಘದ ಸದಸ್ಯನಾಗಿದ್ದ. ಉತ್ತಮ ಕ್ರಿಕೆಟ್ ಆಟಗಾರನಾಗಿದ್ದ ಸುಧೀರ್ ನಿಧನ ಅವನ ಮನೆಯವರನ್ನು, ಆತ್ಮೀಯರಿಗೆ ಶಾಕ್ ನೀಡಿದೆ. ಇನ್ನು ಸುಧೀರ್ ಸಾವಿಗೆ ಬೇರೆಯೇ ಕಾರಣಗಳಿವೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಷ್ಟು ಚಿಕ್ಕ ವಿಷಯಕ್ಕೆ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂದು ಜನ ಮಾತನಾಡಿಕೊಂಡಿದ್ದಾರೆ.
Leave A Reply