ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..

ಕರ್ನಾಟಕದ ಬ್ಯಾಂಕುಗಳಲ್ಲಿ ಹೆಚ್ಚುತ್ತಿರುವ ಹಿಂದಿ ಭಾಷಿಗರಿಂದ ಸ್ಥಳೀಯರಿಗೆ ವ್ಯವಹಾರ ಕಷ್ಟ ಎನ್ನುವ ಪರಿಸ್ಥಿತಿ ಈಗ ಉದ್ಭವವಾಗಿದೆ. ಹಿಂದೆ ರಾಜ್ಯದ ಎಲ್ಲಾ ಬ್ಯಾಂಕುಗಳ ಶಾಖೆಗಳಲ್ಲಿ ರಾಜ್ಯದವರೇ ಇದ್ದರು. ಕರಾವಳಿಯ ಬ್ರಾಂಚುಗಳಲ್ಲಿಯೂ ಸ್ಥಳೀಯರೇ ಇದ್ದ ಕಾರಣ ಬ್ಯಾಂಕ್ ಉದ್ಯೋಗಿಗಳ ಮತ್ತು ಗ್ರಾಹಕರ ನಡುವೆ ಉತ್ತಮ ಬಾಂಧವ್ಯ ಇತ್ತು. ಯಾವುದೇ ಮಾಹಿತಿಯನ್ನು ಸಿಬ್ಬಂದಿಗಳು ಸ್ಥಳೀಯ ಭಾಷೆಗಳಲ್ಲಿಯೇ ನೀಡುತ್ತಿದ್ದ ಕಾರಣ ಗ್ರಾಹಕರಿಗೂ ಅದು ಅರ್ಥವಾಗುತ್ತಿತ್ತು. ಇದರಿಂದ ಎರಡೂ ಕಡೆಯಿಂದ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯುತ್ತಿತ್ತು. ಆದರೆ ಈಗ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಬ್ರಾಂಚುಗಳಲ್ಲಿಯೂ ಹಿಂದಿ ಭಾಷಿಗರದ್ದೇ ಪಾರಮ್ಯ. ಅವರಿಗೆ ನಮ್ಮವರ ಕಷ್ಟ, ಸುಖ ಬಿದ್ದು ಹೋಗಿಲ್ಲ. ಸರಿಯಾಗಿ ಸಂವಹನ ನಡೆಸಬೇಕೆಂಬ ಕಿಂಚಿತ್ ಪರಿಜ್ಞಾನವೂ ಇಲ್ಲ. ಇದರಿಂದ ಬ್ಯಾಂಕುಗಳಲ್ಲಿ ಆಗಾಗ ತಿಕ್ಕಲಾಟಗಳು ಜಾಸ್ತಿಯಾಗುತ್ತಿವೆ.
ಬೆಂಗಳೂರಿನ ಹೊರವಲಯದ ಎಸ್ ಬಿಐ ಶಾಖೆಯ ಮ್ಯಾನೇಜರ್ “ಕನ್ನಡ ಮಾತನಾಡಲ್ಲ, ಇಂಗ್ಲೀಷ್ ಮಾತನಾಡಲ್ಲ, ಹಿಂದಿಯಲ್ಲಿಯೇ ಮಾತನಾಡುತ್ತೇನೆ” ಎಂದು ಡ್ರಾಮ ಮಾಡಿ ಕೊನೆಗೂ ವರ್ಗಾವಣೆಗೊಂಡಿದ್ದಾರೆ.
ಆನೆಕಲ್ ತಾಲೂಕಿನ ಸೂರ್ಯನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮ್ಯಾನೇಜರ್ ನಾನು ಕನ್ನಡ ಮಾತನಾಡಲ್ಲ, ನೀವೆ ಹಿಂದಿ ಮಾತನಾಡಿ, ಇಲ್ಲದಿದ್ದರೆ ಅದೇನು ಮಾಡ್ಕೋತಿರೋ ಮಾಡಿಕೊಳ್ಳಿ ಎಂದು ಹಿಂದಿ ದರ್ಪವನ್ನು ಮೆರೆದಿದ್ದರು. ಮ್ಯಾನೇಜರ್ ಅವರ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ಬ್ಯಾಂಕ್ ಆಡಳಿತ ಮಂಡಳಿ ಮ್ಯಾನೇಜರ್ ಳನ್ನು ವರ್ಗಾವಣೆ ಮಾಡಿದ್ದು, ಈ ಬಗ್ಗೆ ಸ್ವತ: ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಬ್ಯಾಂಕ್ ಸಿಬ್ಬಂದಿಗಳು ಕೆಲಸ ಮಾಡುವ ಸ್ಥಳದ ಪ್ರಾದೇಶಿಕ ಭಾಷೆ ಕಲಿತು ಮಾತನಾಡಬೇಕು. ಏಕೆಂದರೆ ಬ್ಯಾಂಕಿಗೆ ಬರುವ ಎಲ್ಲಾ ಗ್ರಾಹಕರಿಗೆ ಹಿಂದಿ, ಇಂಗ್ಲೀಷ್ ಬರಲೇಬೇಕೆಂದಿಲ್ಲ. ಅವರು ತಮ್ಮ ಹಣದ ವ್ಯವಹಾರ ಮಾಡಲು ಬರುವುದೇ ವಿನ: ಹಿಂದಿ, ಇಂಗ್ಲೀಷ್ ಗೊತ್ತಿದ್ದವರೇ ಹಣದ ವ್ಯವಹಾರ ಮಾಡಬೇಕು ಎಂದೆನಿಲ್ಲ. ಅದನ್ನು ಬೇರೆ ರಾಜ್ಯದಿಂದ ಇಲ್ಲಿ ಬಂದು ಕೆಲಸ ಮಾಡುವ ಬ್ಯಾಂಕ್ ಉದ್ಯೋಗಿಗಳು ಅರ್ಥ ಮಾಡಿಕೊಳ್ಳಬೇಕು. ಬ್ಯಾಂಕಿನಲ್ಲಿ ಗ್ರಾಹಕರೇ ದೊರೆಗಳು ಎನ್ನುವ ಬೋರ್ಡ್ ಅಲ್ಲಲ್ಲಿ ಹಾಕಿದ್ದರೂ ಅದನ್ನು ಪಾಲಿಸುವ ವ್ಯವಧಾನ ಇಲ್ಲದ ಉದ್ಯೋಗಿಗಳಿಂದ ಎಲ್ಲರಿಗೂ ಕೆಟ್ಟ ಹೆಸರು. ಈ ವರ್ಗಾವಣೆ ಶಿಕ್ಷೆ ಉಳಿದವರಿಗೆ ಎಚ್ಚರಿಕೆಯ ಗಂಟೆಯಾಗಲಿ ಎನ್ನುವುದು ನಿರೀಕ್ಷೆ.
Leave A Reply