ಬಿಜೆಪಿ ರ್ಯಾಲಿ ಮಾಡಿದರೆ ನಿಮಗೇಕೆ ಉರಿ ಸಿದ್ದರಾಮಯ್ಯನವರೇ?

ಈ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವರಸೆಯೇ ಅರ್ಥವಾಗುವುದಿಲ್ಲ. ನರೇಂದ್ರ ಮೋದಿ ಯಾವುದೇ ನಿರ್ಧಾರ ಕೈಗೊಂಡರೆ ಅದು ನಿರಂಕುಶವಾದ ಎನ್ನುತ್ತಾರೆ. ಬಿಜೆಪಿಯವರು ಕೋಮುವಾದಿಗಳು ಎನ್ನುತ್ತಾರೆ. ದೇಶದಲ್ಲಿ ತುರ್ತು ಪರಿಸ್ಥಿತಿಯಂಥ ವಾತಾವರಣವಿದೆ ಎಂದು ಕಾಂಗ್ರೆಸ್ಸಿಗರು ಬೊಬ್ಬೆ ಹಾಕುತ್ತಾರೆ.
ಆದರೆ ಇಷ್ಟೆಲ್ಲ ಪುಂಗಿ ಊದಿ, ತಾವು ಬದನೆಕಾಯಿ ತಿನ್ನುತ್ತಾರೆ…
ಪ್ರಸ್ತುತ ಬಿಜೆಪಿ ನಡೆಸಲು ಹೊರಟಿರುವ ರ್ಯಾಲಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು, ಪೊಲೀಸರನ್ನು ಬಿಟ್ಟು ಬಂಧಿಸಿರುವುದು ಬದನೆಕಾಯಿ ತಿನ್ನುವುದು ಅಲ್ಲದೆ ಮತ್ತೇನು?
ಅಷ್ಟಕ್ಕೂ ಪ್ರಜಾಪ್ರಭುತ್ವದಲ್ಲಿ ಒಂದು ರ್ಯಾಲಿಗೂ ಅವಕಾಶವಿಲ್ಲವೇ? ಅವಕಾಶ ಇಲ್ಲ ಎಂದಾದರೆ ಸಿದ್ದರಾಮಯ್ಯನವರದ್ದೇ ನಿರಂಕುಶ ಪ್ರಭುತ್ವವಾಗುವುದಿಲ್ಲವೇ? ಸಿದ್ದರಾಮಯ್ಯ ಹಿಟ್ಲರ್‌ನ ಪ್ರತಿಬಿಂಬವಾಗುವುದಿಲ್ಲವೇ? ನೀವು ಬಳ್ಳಾರಿಗೆ ಪಾದಯಾತ್ರೆ ಮಾಡಿದಾಗ ಯಾರಾದರೂ ಬಂಧಿಸಿದ್ದರೆ ಹೇಗೆ ವರ್ತಿಸುತ್ತಿದ್ದಿರಿ?
ಇಷ್ಟಕ್ಕೂ ಬಿಜೆಪಿಯವರು ರ್ಯಾಲಿ ಮಾಡಹೊರಟಿರುವುದು ಕಾಂಗ್ರೆಸ್ ವಿರುದ್ಧವಲ್ಲ ಅಥವಾ ಸಿದ್ದರಾಮಯ್ಯ ಅವರ ವಿರುದ್ಧವಲ್ಲ. ಬದಲಾಗಿ ಹಲವು ಕೊಲೆ ಆರೋಪದಲ್ಲಿ ಸಿಲುಕಿರುವ ಪಿಎಫ್‌ಐ, ಕೆಎಫ್‌ಡಿ, ಎಸ್‌ಡಿಪಿಐ ಸಂಘಟನೆಗಳ ವಿರುದ್ಧ. ಈ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವಿರುದ್ಧ ತನಿಖೆ ಮಾಡುವಂತೆ ಕೇರಳದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆೆ (ಎನ್‌ಐಎ)ಯೇ ಆದೇಶ ನೀಡಿದೆ. ಹೀಗಿರುವಾಗ ಕರ್ನಾಟಕದಲ್ಲಿ ಅವುಗಳನ್ನು ನಿಷೇಧಿಸಬೇಕು ಎಂದು ಪ್ರತಿಭಟನೆಯನ್ನೇ ಮಾಡುವುದು ತಪ್ಪು ಎಂದರೆ ನೀವು ಪ್ರಜಾಪ್ರಭುತ್ವಕ್ಕೆ ಎಂಥಾ ಗೌರವ ಕೊಟ್ಟಂತಾಗುತ್ತದೆ ಸಿದ್ದರಾಮಯ್ಯನವರೇ?
ಹರಿಯಾಣದಲ್ಲಿ ಮುಸ್ಲಿಂ ಯುವಕ ಜುನೈದ್ ಖಾನ್‌ನನ್ನು ಹತ್ಯೆ ಮಾಡಿದರೆ ದೇಶಾದ್ಯಂತ ಕಾಂಗ್ರೆಸ್ಸಿಗರು ಬೊಬ್ಬೆ ಹಾಕಿದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಬಿಜೆಪಿ, ಕಾಂಗ್ರೆಸ್‌ನ 12 ಕಾರ್ಯಕರ್ತರ ಹತ್ಯೆ ಮಾಡಲಾಗಿದೆ. ಆದರೂ ಸಿಎಂ ಯಾವ ಕ್ರಮ ಕೈಗೊಂಡಿದ್ದಾಾರೆ? ಇದು ಯಾವ ಪ್ರಭುತ್ವ ಎಂದು ವಿವರಿಸಬಲ್ಲಿರಾ?
ಅದಾಗಲೇ ಸಿದ್ದರಾಮಯ್ಯನವರು, ಜಾತಿ, ಧರ್ಮ ನೋಡಿ ಯೋಜನೆ ಜಾರಿಗೆ ತಂದಿದ್ದು ರಾಜ್ಯದ ಜನರಿಗೇ ಗೊತ್ತಿದೆ. ಮುಂದಿನ ವರ್ಷ ಚುನಾವಣೆಯಿದೆ. ಈ ರ್ಯಾಲಿಯಿಂದ ಬಿಜೆಪಿಗೆ ಅನುಕೂಲವಾದರೆ ಎಂಬ ಭಯ ನಿಮ್ಮನ್ನು ನಿರಂಕುಶವನ್ನಾಗಿ ಮಾಡುತ್ತಿದೆಯೇ ಹೇಳಿ.