ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!

ಕಾಂಗ್ರೆಸ್ ಪಕ್ಷದ ವಿರುದ್ಧ ಕಾರ್ಯಕ್ರಮದಲ್ಲಿ ಸುದ್ದಿ ಪ್ರಸಾರ ಮಾಡಿರುವುದಕ್ಕೆ ರಿಪಬ್ಲಿಕ್ ವಾಹಿನಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಹಾಗೂ ಇದೇ ವಿಷಯದಲ್ಲಿ ಅಪಪ್ರಚಾರ ಮಾಡಿದ್ದಾರೆಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿಯ ಐಟಿ ಸೆಲ್ ಮುಖ್ಯಸ್ಥರಾದ ಅಮಿತ್ ಮಾಳವೀಯಾ ಅವರ ಮೇಲೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ಏನು?
ಟರ್ಕಿಯ ಇಸ್ತಾನಾಬುಲ್ ನಲ್ಲಿ ಕಾಂಗ್ರೆಸ್ ಪಕ್ಷದ ಅಂತರಾಷ್ಟ್ರೀಯ ಕಚೇರಿ ಇದೆ ಎಂದು ಇವರಿಬ್ಬರೂ ಸುಳ್ಳು ಸುದ್ದಿಯನ್ನು ಹರಡಿಸುತ್ತಿರುವುದಾಗಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ರಜಾಕಾಲದ ನ್ಯಾಯಮೂರ್ತಿ ಎಸ್ ರಾಚಯ್ಯ ಅವರು ಮಧ್ಯಂತರ ತಡೆಯಾಜ್ಞೆಯನ್ನು ನೀಡಿದ್ದಾರೆ. ಆರೋಪಿಗಳು ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ಹಿರಿಯ ನ್ಯಾಯಮೂರ್ತಿ ಅರುಣ್ ಶ್ಯಾಮ್ ಅವರು ಅರ್ನಬ್ ಗೋಸ್ವಾಮಿ ಪರ ವಾದ ಮಂಡಿಸಿ ” ನನ್ನ ಕಕ್ಷಿದಾರ ತಮ್ಮ ವಾಹಿನಿಯ ಕಾರ್ಯಕ್ರಮದಲ್ಲಿ ಟರ್ಕಿ ತಮ್ಮ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾದ ದೇಶವಾಗಿದೆ. ಅಂತಹ ಶತ್ರುರಾಷ್ಟ್ರದಲ್ಲಿ ಭಾರತದ ರಾಜಕೀಯ ಪಕ್ಷವೊಂದರ ಕಚೇರಿ ಇರುವುದು ಯಾಕೆ ಎಂದು ಪ್ರಶ್ನಿಸಲಾಗಿತ್ತು. ಅದು ಅವರ ಅಭಿಪ್ರಾಯವಾಗಿದ್ದು, ಅದನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಸುದ್ದಿಯನ್ನು ಡಿಜಿಟಲ್ ಕಂಟೆಂಟ್ ನಲ್ಲಿ ಹಾಕುವಾಗ ಅಜಾಗರೂಕತೆಯಿಂದ ಹಾಕಿರುವ ಫೋಟೋವೊಂದನ್ನು ನಂತರ ತೆಗೆಯಲಾಗಿದೆ. ಆದ್ದರಿಂದ ಈ ವಿಷಯದಲ್ಲಿ ಕಕ್ಷಿದಾರರಿಂದ ಯಾವುದೇ ತಪ್ಪು ನಡೆದಿಲ್ಲ” ಎಂದು ವಾದ ಮಂಡಿಸಿದ್ದರು.
ಈ ವಾದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಾಸಿಕ್ಯೂಟರ್ ” ಸುಳ್ಳು ಸುದ್ದಿ ಹರಡಿಸಿ ನಂತರ ತಮ್ಮಿಂದಾದ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ” ಎಂದು ಪ್ರತಿವಾದ ಮಂಡಿಸಿದರು. ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸು ಜಾರಿ ಮಾಡಿ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ. ಇಂಡಿಯನ್ ಯೂತ್ ಕಾಂಗ್ರೆಸ್ ಇದರ ಕಾನೂನು ಘಟಕದ ಮುಖ್ಯಸ್ಥರಾದ ಶ್ರೀಕಾಂತ್ ಸ್ವರೂಪ್ ಬಿ ಎನ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ರಿಪಬ್ಲಿಕ್ ವಾಹಿನಿಯಲ್ಲಿ ಸ್ಪಷ್ಟೀಕರಣ ನೀಡಿರುವ ಅರ್ನಬ್ ಗೋಸ್ವಾಮಿ ” ಟರ್ಕಿ ಶತ್ರು ರಾಷ್ಟ್ರ ಎಂದು ಭಾರತವೇ ಘೋಷಿಸಿದೆ. ನಮ್ಮ ಶತ್ರು ಪಾಕಿಸ್ತಾನಕ್ಕೆ ಸಹಾಯ ಮಾಡುವ ಯಾವುದೇ ದೇಶ ನಮಗೆ ಶತ್ರು ರಾಷ್ಟ್ರವೇ ಆಗಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಶತ್ರು ರಾಷ್ಟ್ರ ಟರ್ಕಿಯಲ್ಲಿ ಕಚೇರಿ ಇಲ್ಲ ಎಂದಾದರೆ ಲಿಖಿತವಾಗಿ ಜನರ ಮುಂದೆ ಇಡಲಿ. ಅದನ್ನು ನಾವು ಖುಷಿಯಿಂದ ಸುದ್ದಿ ಮಾಡುತ್ತೇವೆ” ಎಂದು ಹೇಳಿದ್ದಾರೆ.
ರಿಪಬ್ಲಿಕ್ ವಾಹಿನಿ ನಮ್ಮ ಪರವಾಗಿ ವಾದ ಮಾಡಿ ಸತ್ಯವನ್ನು ಗೆಲ್ಲಿಸಿದ್ದೀರಿ ಎನ್ನುವ ಅರ್ಥದ ವಾಕ್ಯಗಳನ್ನು ಬರೆದು ಅರುಣ್ ಶ್ಯಾಮ್ ಅವರಿಗೆ ಧನ್ಯವಾದ ತಿಳಿಸಿದೆ.
Leave A Reply