ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!

ಭಾರತೀಯರು ವಿಶೇಷವಾಗಿ ರಾಜಸ್ಥಾನದ ಸಿಹಿ ತಿಂಡಿ ವ್ಯಾಪಾರಿಗಳು ಯಾವುದೇ ಕಾರಣಕ್ಕೂ ತಮ್ಮ ಸಿಹಿತಿಂಡಿಗಳ ಹೆಸರಿನಲ್ಲಿ ಒಂದು ಅಕ್ಷರವೂ ಪಾಕ್ ಎಂದು ಇರುವುದನ್ನು ಸಹಿಸುವುದಿಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ. ಪಾಕಿಸ್ತಾನದ ಮೇಲೆ ಭಾರತದ ಆಪರೇಶನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸಿನಿಂದ ಉತ್ತೇಜಿತರಾಗಿರುವ ಉದ್ಯಮಿಗಳು ತಮ್ಮ ಮಳಿಗೆಯಲ್ಲಿ ಒಂದೇ ಒಂದು ಪಾಕ್ ಶಬ್ದ ಇರಬಾರದು ಎಂದು ನಿರ್ಧರಿಸಿದ್ದಾರೆ.
ಜೈಪುರದಲ್ಲಿ ಮಾರುವ ಸಿಹಿತಿಂಡಿಗಳಾದ ಮೋತಿ ಪಾಕ್, ಆಮ್ ಪಾಕ್, ಗೋಂಡ್ ಪಾಕ್, ಮೈಸೂರ್ ಪಾಕ್ ಮತ್ತು ಇತರ ಪಾಕ್ ಹೆಸರಿನ ಸಿಹಿತಿಂಡಿಗಳು ಇನ್ನು ಮುಂದೆ ಮೋತಿ ಶ್ರೀ, ಆಮ್ ಶ್ರೀ, ಗೋಂಡ್ ಶ್ರೀ, ಮೈಸೂರು ಶ್ರೀ ಹೆಸರಿನಿಂದ ಕರೆಯಲ್ಪಡಲಿವೆ. ಇದು ಒಂದಿಷ್ಟು ವಿಪರೀತವಾಯಿತು ಎಂದು ಕೆಲವರಿಗೆ ಅನಿಸಬಹುದು. ಆದರೆ ರಾಷ್ಟ್ರಭಕ್ತಿಯ ವಿಷಯ ಬಂದಾಗ ಇದು ಭವಿಷ್ಯದಲ್ಲಿ ನಿಜಕ್ಕೂ ಉತ್ತಮ ಕಾರ್ಯ ಎಂದು ಅನಿಸದೇ ಇರದು.
ಅಲ್ಲಿನ ಸಿಹಿ ವ್ಯಾಪಾರಿಗಳ ಪ್ರಕಾರ, ಅಬ್ಬರದ ದೇಶಭಕ್ತಿಯನ್ನು ಮೈಗೂಡಿಸಿಕೊಂಡಾಗ ಇದೆಲ್ಲ ಸಹಜ. ಆಗ ಇದಕ್ಕೆ ಯಾವುದೇ ಲಾಜಿಕ್ ಹೊಂದುವುದಿಲ್ಲ. ಇನ್ನು ಈ ವಿಷಯದಲ್ಲಿ ಸರಿ ಮತ್ತು ತಪ್ಪುಗಳ ಚರ್ಚೆ ಅಗತ್ಯವೂ ಇರುವುದಿಲ್ಲ ಎಂದಿದ್ದಾರೆ. ಇಲ್ಲಿ ಪಾಕ್ ಎಂದರೆ ಪಾಕಿಸ್ತಾನದ ಶಾರ್ಟ್ ಫಾರಂ ಅಲ್ಲ ಎನ್ನುವುದನ್ನು ಯಾರೂ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಅಷ್ಟಕ್ಕೂ ಸಿಹಿ ತಿಂಡಿಗಳೊಂದಿಗೆ ಪಾಕ್ ಎನ್ನುವ ಶಬ್ದ ಬಂದದ್ದು ಹೇಗೆ ಎಂದರೆ ಅದು ಪಾಕ ಎನ್ನುವ ಶಬ್ದವೇ ಆಗಿದೆ. ಇನ್ನು ಪಾಕ್ ಅಥವಾ ಪಾಕ್ ಎಂದರೆ ಅದು ಸಿಹಿ ತಿಂಡಿ ತಯಾರಿಸುವಾಗ ಉತ್ಪಾದಿಸಲಾಗುವ ಸಿಹಿದ್ರಾವಣ.
ಇನ್ನು ಹಿಂದಿ ಪಂಡಿತರ ಪ್ರಕಾರ ಹಿಂದಿ ಭಾಷೆಯಲ್ಲಿಯೂ ಪಾಗ್ ಎನ್ನುವ ಶಬ್ದ ಬಳಕೆಯಲ್ಲಿದೆ. ಪಾಗ್ ಎಂದರೆ ಸಿಹಿ ಸಿರಪ್ ಎಂದೇ ಉಲ್ಲೇಖಿಸಬಹುದು. ಈ ಕನ್ನಡದ ಪಾಕ ಮತ್ತು ಹಿಂದಿಯ ಪಾಗ ಎರಡೂ ಕೂಡ ಮೂಲ ಸಂಸ್ಕೃತದ ಶಬ್ದಗಳಾಗಿದ್ದು, ಅದರಲ್ಲಿ ಪಾಕ್ವ ಎಂದು ಹೇಳಲಾಗುತ್ತದೆ. ಅದರ ಮೂಲ ಅರ್ಥ ಬೇಯಿಸಿದ ಆಹಾರ ಎಂದೇ ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಲಾಜಿಕ್ ಇಲ್ಲಿ ಅನ್ವಯವಾಗುವುದಿಲ್ಲ. ಯಾಕೆಂದರೆ ಪಾಕ್ ಎನ್ನುವುದು ನಮ್ಮ ಶತ್ರು ರಾಷ್ಟ್ರ. ಅದರ ಯಾವ ಸಣ್ಣ ನಿಶಾನೆಯೂ ನಮ್ಮ ಆಹಾರ ವಸ್ತುಗಳಲ್ಲಿ ಇರಬಾರದು ಎಂದು ಜೈಪುರದ ವ್ಯಾಪಾರಿಗಳು ದೃಢ ನಿರ್ಧಾರ ಮಾಡಿದ್ದಾರೆ.
Leave A Reply