ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ 9 ತಿಂಗಳ ಗಂಡು ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹವಾಮಾನ ಬದಲಾವಣೆಯಿಂದ ರಾಜ್ಯದಲ್ಲಿ ಈಗಾಗಲೇ ಡೆಂಘಿ ಸೇರಿ ವಿವಿಧ ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದೆ. ಹೀಗಿರುವಾಗ ಯಾವುದೇ ಪ್ರವಾಸದ ಹಿನ್ನಲೆ ಇಲ್ಲದ 9 ತಿಂಗಳ ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಏಷ್ಯಾದ ಕೆಲ ಭಾಗಗಳಲ್ಲಿ ಹಾಗೂ ನಿಧಾನವಾಗಿ ದೇಶದ ವಿವಿಧ ರಾಜ್ಯಗಳಲ್ಲೂ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಆಂಧ್ರಪ್ರದೇಶದಲ್ಲಿ ಜನದಟ್ಟಣೆ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಇನ್ನು ರಾಜ್ಯದಲ್ಲಿಯೂ ಜೂನ್ ಮೊದಲ ವಾರದಲ್ಲಿ ಶಾಲೆಗಳು ಆರಂಭವಾಗಲಿರುವ ಹಿನ್ನಲೆಯಲ್ಲಿ ಮಕ್ಕಳಲ್ಲಿ ಸೋಂಕು ಹರಡುವ ಬಗ್ಗೆ ಆತಂಕ ಹೆಚ್ಚಾಗಿದೆ. ಗುರುವಾರ ರಾತ್ರಿ ಚಳಿ, ಜ್ವರದ ಅನಾರೋಗ್ಯ ಸಮಸ್ಯೆಯಿಂದ ನಗರದ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿರುವ 9 ತಿಂಗಳ ಗಂಡು ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮಗುವನ್ನು ಮಕ್ಕಳ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, 24 ಗಂಟೆಗಳ ನಿಗಾವಹಿಸಲಾಗಿದೆ.
ಮಗುವಿನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ಕೋವಿಡ್ ನಿಂದ ಯಾವುದೇ ಅಪಾಯ ಇಲ್ಲದಿದ್ದರೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ.
Leave A Reply