ಪತ್ನಿಯ ಸೀಮಂತ ದಿನವೇ ಕುಸಿದು ಬಿದ್ದು ಪತಿ ಮೃತ್ಯು! ನಿಲ್ಲುತ್ತಿಲ್ಲ ಹಠಾತ್ ಹೃದಯಾಘಾತಗಳು!

ಪತ್ನಿಯ ಸೀಮಂತದ ದಿನವೇ ಕುಸಿದು ಬಿದ್ದು ಪತಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನದಲ್ಲಿ ನಡೆದಿದೆ. ಕನ್ಯಾನ ಮಿತ್ತನಡ್ಕ ನಿವಾಸಿ ಪಿಕಪ್ ಚಾಲಕ ಸತೀಶ್ (33) ಮೃತ ದುರ್ದೈವಿ. ಪತ್ನಿಯ ಸೀಮಂತದ ದಿನ ಕುಸಿದು ಬಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಯುವ ಸಮುದಾಯದಲ್ಲಿ ಈ ಹಠಾತ್ತನೇ ಹೃದಯಾಘಾತ ಸಂಭವಿಸುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿರುವ ವಿಷಯ. ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರಿಂದ ಹಿಡಿದು ಇತ್ತೀಚೆಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿಯವರ ತನಕ ಅನೇಕ ಯುವ ಹೃದಯಗಳು ಹಠಾತ್ತನೇ ಆಘಾತಗೊಳಗಾಗಿ ತಮ್ಮ ಉಸಿರನ್ನೇ ನಿಲ್ಲಿಸಿವೆ. ಇದಕ್ಕೆ ಕಾರಣಗಳು ಏನು ಎನ್ನುವುದರ ಬಗ್ಗೆ ಇಲ್ಲಿಯ ತನಕ ಸಮರ್ಪಕವಾಗಿರುವ ಉತ್ತರ ಯಾರ ಬಳಿಯಲ್ಲಿಯೂ ಇಲ್ಲ. ಯಾಕೆ? ಬೇರೆ ಬೇರೆ ಜನರು ತಮಗೆ ತೋಚಿದ್ದನ್ನು ಹೇಳಬಹುದು.
ಕೋವಿಡ್ ಲಸಿಕೆಗಳ ಬಗ್ಗೆ ಆರೋಪ ಮಾಡಿದವರೂ ಇದ್ದಾರೆ. ಈ ಕಾಲದ ಆಹಾರ ಶೈಲಿ, ಜೀವನ ಕ್ರಮ, ವ್ಯಾಯಾಮದ ಕೊರತೆ ಹೀಗೆ ಬೇರೆ ಬೇರೆ ಕಾರಣಗಳನ್ನು ಪಟ್ಟಿ ಮಾಡುತ್ತಾರೆ. ಆದರೆ ನಿರ್ದಿಷ್ಟವಾಗಿ ಇದೇ ಕಾರಣಕ್ಕೆ ಯುವಜನರಲ್ಲಿ ಹೃದಯಾಘಾತವಾಗುತ್ತಿದೆ ಎಂದು ಹೇಳುವ ಯಾವುದೇ ಅಧ್ಯಯನ ಇಲ್ಲಿಯ ತನಕ ನಡೆದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಯುವಕರು ಖುಷಿ ಖುಷಿಯಾಗಿ ಇರುವಾಗಲೇ ಸಾವನ್ನಪ್ಪುತ್ತಿದ್ದಾರೆ.
ಹೀಗೆ ಸಾವು ಸಂಭವಿಸುತ್ತಿರುವುದು ನಿಜಕ್ಕೂ ಯೋಚನೆ ಮಾಡಬೇಕಾದ ಸಂಗತಿ. ಈ ಹಠಾತ್ ಅಂತ್ಯಗಳಿಗೆ ಸೂಕ್ತ ಉತ್ತರ ಕಂಡುಹಿಡಿಯದೇ ಹೋದ್ದಲ್ಲಿ ಭವಿಷ್ಯದಲ್ಲಿ ನಮ್ಮ ದೇಶ ಅಮೂಲ್ಯವಾದ ಯುವಶಕ್ತಿಗಳನ್ನು ಕಳೆದುಕೊಂಡರೆ ಅದರಿಂದ ಆಗುವ ನಷ್ಟ ಚಿಕ್ಕದ್ದಲ್ಲ.
Leave A Reply