ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!

ತೆಲಂಗಾಣದಲ್ಲಿ ಭಾರತೀಯ ಜನತಾ ಪಾರ್ಟಿಯ ಫೈರ್ ಬ್ರಾಂಡ್ ನಾಯಕ, ಶಾಸಕ ಟಿ ರಾಜಾ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಾನು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದರೂ ಹಿಂದೂತ್ವದ ಸಿದ್ಧಾಂತಕ್ಕೆ ಬದ್ಧನಾಗಿಯೇ ಮುಂದುವರೆಯಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಅವರ ರಾಜೀನಾಮೆಯಿಂದ ಭಾಜಪಾದಲ್ಲಿ ಹಿಂದೂತ್ವದ ಪ್ರಬಲ ಪ್ರತಿಪಾದಕ, ಉಗ್ರ ಭಾಷಣಕಾರ, ಶಾಸಕನೊಬ್ಬನ ನಿರ್ಗಮನವಾದಂತಾಗಿದೆ. ತಮ್ಮ ರಾಜೀನಾಮೆ ಪತ್ರವನ್ನು ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಜಿ ಕಿಶನ್ ರೆಡ್ಡಿಯವರಿಗೆ ಸಲ್ಲಿಸಿರುವ ರಾಜಾ ಸಿಂಗ್ ತಾವು ನೂತನ ರಾಜ್ಯಾಧ್ಯಕ್ಷರಾಗಿ ನೇಮಕವಾಗಲಿರುವ ರಾಮಚಂದರ್ ರಾವ್ ಅವರ ನಾಯಕತ್ವವನ್ನು ವಿರೋಧಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು. ತಮ್ಮ ಈ ನಿರ್ಧಾರದಿಂದ ಲಕ್ಷಾಂತರ ಭಾಜಪಾ ಕಾರ್ಯಕರ್ತರಿಗೆ ಖಂಡಿತವಾಗಿ ಶಾಕ್ ಮತ್ತು ನಿರಾಸೆಯಾಗಿದೆ ಎಂದು ತಿಳಿದಿದೆ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಭಾಜಪಾ ಕಟ್ಟಿ ಬೆಳೆಸಿದ ಅಸಂಖ್ಯಾತ ಕಾರ್ಯಕರ್ತರ ಭಾವನೆಗಳನ್ನು ಹೈಕಮಾಂಡ್ ಅರಿತು ಅದರಂತೆ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬೇಕಿತ್ತು. ಕಷ್ಟಕಾಲದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕಾರ್ಯಕರ್ತರನ್ನು ಬದಿಗೊತ್ತಿ, ಯಾರನ್ನೋ ಅಧ್ಯಕ್ಷರನ್ನಾಗಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ತೆಲಂಗಾಣದಲ್ಲಿ ಸರಕಾರ ರಚಿಸುವ ಘಳಿಗೆ ಸನಿಹದಲ್ಲಿರುವಾಗ ಉತ್ತಮ ನಾಯಕತ್ವವನ್ನು ಪಕ್ಷ ನೀಡಿದ್ದರೆ ಆಗ ಸಂಘಟನೆಗೂ ಬಲ ಬರುತ್ತಿತ್ತು. ಆದರೆ ನಾಯಕತ್ವದ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರದಿಂದ ಕಾರ್ಯಕರ್ತರಿಗೆ ನೋವಾಗಿದೆ. ಇದರಿಂದ ಪಕ್ಷ ಯಾವ ದಿಕ್ಕಿನಲ್ಲಿ ಮುನ್ನುಗ್ಗುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. ತೆಲಂಗಾಣದಲ್ಲಿ ನಮ್ಮ ಪಕ್ಷದ ಶಾಸಕರು, ಸಂಸದರು ಮತ್ತು ಹಿರಿಯ ನಾಯಕರು ಪಕ್ಷವನ್ನು ಸದೃಢವಾಗಿ ಕಟ್ಟುವಲ್ಲಿ ಶ್ರಮಿಸಿದ ಪರಿಣಾಮ ಪಕ್ಷ ಇಲ್ಲಿ ಶಕ್ತಿಶಾಲಿಯಾಗಿದೆ. ಆದರೆ ಕೆಲವರು ತಮ್ಮ ವೈಯಕ್ತಿಕ ಕಾರಣದಿಂದ ಕೇಂದ್ರಿಯ ನಾಯಕತ್ವವನ್ನು ದಾರಿ ತಪ್ಪಿಸಿ, ನಿರ್ಧಾರವನ್ನು ತಮ್ಮ ಇಚ್ಚೆಗನುಗುಣವಾಗಿ ತೆಗೆದುಕೊಂಡ ಕಾರಣ ಭವಿಷ್ಯದಲ್ಲಿ ಏನಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರು ಬಾರಿ ಶಾಸಕರಾಗಿರುವ ಟಿ ರಾಜಾ ಸಿಂಗ್ “ತಾವಿನ್ನು ಮೌನವಾಗಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಎಲ್ಲವನ್ನು ಸಹಿಸಿಕೊಂಡು ಹೋದರೆ ಪಕ್ಷದ ಲಕ್ಷಾಂತರ ನಿಸ್ವಾರ್ತಿ ಕಾರ್ಯಕರ್ತರ ಭಾವನೆಗಳೊಂದಿಗೆ ಚೆಲ್ಲಾಟವಾಡಿದಂತೆ ಆಗುತ್ತದೆ. ಪಕ್ಷದ ಕೇಂದ್ರಿಯ ನಾಯಕತ್ವ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಎಡವಿರುವುದು ಪಕ್ಷದ ಮುಂದಿನ ಪ್ರಗತಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ರಾಜಾ ಸಿಂಗ್ ತಮ್ಮ ರಾಜೀನಾಮೆ ಪತ್ರವನ್ನು ನಿರ್ಗಮಿತ ರಾಜ್ಯಾಧ್ಯಕ್ಷ ಕಿಶನ್ ರೆಡ್ಡಿ ಅವರಿಗೆ ನೀಡಿದ್ದು, ಅದನ್ನು ತೆಲಂಗಾಣ ವಿಧಾನಸಭೆಯ ಸಭಾಧ್ಯಕ್ಷರಿಗೆ ನೀಡುವಂತೆ ವಿನಂತಿಸಿದ್ದಾರೆ. ಗೆಲ್ಲುವ ಸನಿಹದಲ್ಲಿದ್ದ ಪಕ್ಷಕ್ಕೆ ಮುಳುಗು ನೀರು ಬರುವ ಸಾಧ್ಯತೆ ಇದ್ದು, ಇದಕ್ಕೆ ಕಾರ್ಯಕರ್ತರು ಯಾವತ್ತೂ ಕಾರಣರಲ್ಲ, ಕೇವಲ ನಾಯಕರು ಎಂದು ಅವರು ಹೇಳಿದ್ದಾರೆ.