ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು

ಉಡುಪಿ ಜಿಲ್ಲೆಯ ಬ್ರಹ್ಮಾವರದ ಕುಂಜಾಲಿನ ಜಂಕ್ಷನ್ ನಲ್ಲಿ ಪತ್ತೆಯಾದ ದನದ ಕಳೇಬರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೇಶವ, ರಾಮಣ್ಣ, ಪ್ರಸಾದ್, ನವೀನ್, ಸಂದೇಶ್ ಮತ್ತು ರಾಜೇಶ್ ಎಂದು ಗುರುತಿಸಲಾಗಿದೆ. ಅರೋಪಿಗಳನ್ನು ಬ್ರಹ್ಮಾವರದ ಹಂಡಾಡಿಯ ಮಠಪಾಡಿಯಿಂದ ಬಂಧಿಸಲಾಗಿದೆ.
ಬಂಧಿತರಲ್ಲಿ ಒಬ್ಬ ಮೇಸ್ತ್ರಿ ಹಾಗೂ ಇನ್ನೊಬ್ಬ ಚಾಲಕ ಎಂದು ಹೇಳಲಾಗಿದೆ.
ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಅವಲೋಕಿಸಿ, ವಾಹನ ಸಾಗಾಟದ ಮಾರ್ಗ ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ರಾಮ ಎನ್ನುವವನು ಕೇಶವನಿಂದ ದನವನ್ನು ಪಡೆದುಕೊಂಡಿದ್ದ. ಅದನ್ನು ಸಂದೇಶ ಎನ್ನುವವನ ವಾಹನದಲ್ಲಿ ಸಾಗಿಸಿ, ರಾಮ, ಪ್ರಸಾದ್ ಹಾಗೂ ನವೀನ್ ಎನ್ನುವವರು ಕತ್ತರಿಸಿ ಮಾಂಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಂತರ ಮಾಂಸವನ್ನು ರಾಜೇಶನ ಮನೆಗೆ ತೆಗೆದುಕೊಂಡು ಹೋಗಲಾಗಿದೆ. ದಾರಿಯಲ್ಲಿ ದನದ ಅಸ್ಥಿಪಂಜರದ ತುಂಡು ಬಿದ್ದುಹೋಗಿದೆ. ಉಳಿದ ಪಳೆಯುಳಿಕೆಯನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಬೇರೆಡೆ ವಿಲೇವಾರಿ ಮಾಡಲಾಗಿದೆ.
ಯಾವುದೇ ಕೋಮು ದ್ವೇಷ ಹರಡಿಸುವ ನಿಟ್ಟಿನಲ್ಲಿ ಈ ಕೃತ್ಯ ಮಾಡಲಾಗಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳು ಗೋಮಾಂಸದ ಕಾರಣಕ್ಕಾಗಿ ದನವನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಅವರು ಆರೋಪಿಗಳಿಗೆ ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲ. ಇನ್ನು ಈ ವಿಷಯದಲ್ಲಿ ಯಾವುದೇ ತಪ್ಪು ಸುದ್ದಿಗಳನ್ನು ಹರಡಿಸುವುದು ಅಕ್ಷಮ್ಯ ಅಪರಾಧ. ಯಾರೂ ಕೂಡ ಫೇಕ್ ಸಂಗತಿಗಳನ್ನು ಸಾಮಾಜಿಕ ಜಾಣತಾಲಗಳಲ್ಲಿ ಹರಡಿಸಬಾರದು. ಕೋಮುಸೂಕ್ಷ್ಮ ಘಟನೆಗಳಿಗೆ ಕಾರಣರಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಕೋಮು ಸಾಮರಸ್ಯವನ್ನು ಕಾಪಾಡಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಅವರು ಹೇಳಿದರು.