ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್… ಇನ್ಫೋಸಿಸ್ ಉದ್ಯೋಗಿ ಬಂಧನ!

ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಶೌಚಾಲಯದಲ್ಲಿ ವಿದ್ಯಾರ್ಥಿಯೊಬ್ಬ ವಿಡಿಯೋ ಕ್ಯಾಮೆರಾ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ಮಾಡುತ್ತಿದ್ದ ಪ್ರಕರಣ ಸಾಕಷ್ಟು ದೊಡ್ಡ ರೀತಿಯಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಅದರ ನಂತರ ಉಡುಪಿಯಲ್ಲಿಯೂ ಪಾರಾ ಮೆಡಿಕಲ್ ವಿದ್ಯಾಸಂಸ್ಥೆಯಲ್ಲಿ ಇಂತಹುದೇ ಪ್ರಕರಣ ದಾಖಲಾಗಿತ್ತು. ನಂತರ ಈಗ ಇಂತಹುದೇ ಘಟನೆ ಬೆಂಗಳೂರಿನ ಇನ್ಫೋಸಿಸ್ ಕಚೇರಿಯಲ್ಲಿ ನಡೆದಿದೆ. ಮಹಿಳಾ ಉದ್ಯೋಗಿಯ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಉದ್ಯೋಗಿಯೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯ ಮೊಬೈಲಿನಲ್ಲಿ 30 ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ ಪತ್ತೆಯಾಗಿದೆ.
ಮಹಿಳಾ ಉದ್ಯೋಗಿ ಟಾಯ್ಲೆಟಿಗೆ ಹೋಗಿದ್ದಾಗ ವಿಡಿಯೋ ಚಿತ್ರೀಕರಣ ಮಾಡಿದ್ದ ಪ್ರಕರಣದಲ್ಲಿ ಇನ್ಫೋಸಿಸ್ ಉದ್ಯೋಗಿಯನ್ನು ಬಂಧಿಸಿದ್ದಾರೆ. ರಹಸ್ಯವಾಗಿ ಪಕ್ಕದ ಟಾಯ್ಲೆಟಿನಲ್ಲಿ ನಿಂತು ಆರೋಪಿ ಈ ಕೃತ್ಯ ಎಸಗುತ್ತಿದ್ದ ಎಂದು ದೂರುದಾರೆ ಹೇಳಿದ್ದಾರೆ. ಆರೋಪಿಯನ್ನು ಬೇರೆ ರಾಜ್ಯದ 28 ವರ್ಷದ ಉದ್ಯೋಗಿ ಸ್ವಪ್ನಿಲ್ ನಾಗೇಶ್ ಮಲಿ ಎಂದು ಗುರುತಿಸಲಾಗಿದೆ. ಈತ ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರೆಕಾರ್ಡ್ ಮಾಡಿದ್ದಾನೆ. ಈತ ರೆಕಾರ್ಡ್ ಮಾಡುತ್ತಿರುವುದು ಎದುರುಗಡೆ ಡೋರ್ ಮೇಲೆ ಪ್ರತಿಬಿಂಬ ಮೂಡಿದೆ.
ಕೂಡಲೇ ಮಹಿಳೆ ಬೊಬ್ಬೆ ಹಾಕಿದ್ದಾಳೆ. ತಾನು ಸಿಕ್ಕಿಬಿದ್ದದ್ದು ಗೊತ್ತಾದ ಕೂಡಲೇ ಆತ ಆಕೆಯ ಕ್ಷಮೆ ಕೋರಿದ್ದಾನೆ. ಈ ಹಂತದಲ್ಲಿ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಬಂದು ಪರಿಶೀಲಿಸಿದಾಗ ಆತ ಮೊಬೈಲಿನಲ್ಲಿ ಮೂವತ್ತಕ್ಕೂ ಅಧಿಕ ಮಹಿಳೆಯರ ವಿಡಿಯೋ ಪತ್ತೆಯಾಗಿದೆ.
ಮಹಿಳೆಯ ಪತಿಗೆ ಈ ವಿಷಯ ತಿಳಿದು ಆತನ ಸಲಹೆಯಂತೆ ದೂರುದಾರೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಎಫ್ ಐ ಆರ್ ನಲ್ಲಿ ದಾಖಲಾದ ವಿವರಗಳ ಪ್ರಕಾರ ದೂರುದಾರೆ ಹೆಚ್ಚಿನ ಅವಧಿಯಲ್ಲಿ ವರ್ಕ್ ಫ್ರಂ ಹೋಂನಲ್ಲಿಯೇ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಕಂಪೆನಿ ತಿಂಗಳಲ್ಲಿ 10 ದಿನವಾದರೂ ಕಚೇರಿಗೆ ಬಂದೇ ಕೆಲಸ ಮಾಡಬೇಕು ಎಂದು ಸೂಚಿಸಿರುವ ಹಿನ್ನಲೆಯಲ್ಲಿ ಜೂನ್ 30 ರಂದು ಕಚೇರಿಗೆ ಬಂದಿದ್ದ ದೂರುದಾರೆ ಟಾಯ್ಲೆಟಿಗೆ ಹೋಗಿದ್ದಾರೆ. ಈ ಹಂತದಲ್ಲಿ ಅವರಿಗೆ ಟಾಯ್ಲೆಟ್ ಒಳಗಡೆ ಎದುರಿಗೆ ಪಕ್ಕದ ಟಾಯ್ಲೆಟಿನಿಂದ ಪ್ರತಿಬಿಂಬ ಕಂಡಿದೆ. ಅದು ಏನೆಂದು ನೋಡಿದಾಗ ತಾನಿದ್ದ ವಾಶ್ ರೂಂನ ಪಕ್ಕದ ವಾಶ್ ರೂಂನ ನಂತರದ ವಾಶ್ ರೂಂನಿಂದ ಯುವತಿಯೊಬ್ಬಳು ಹೊರಗೆ ಬಂದಿದ್ದಳು. ಇವರು ಮತ್ತೆ ತಮ್ಮ ವಾಶ್ ರೂಂ ಒಳಗೆ ಹೋಗಿ 5-6 ನಿಮಿಷ ಇದ್ದಾಗ ತಮ್ಮ ಪಕ್ಕದ ವಾಶ್ ರೂಂನಿಂದ ಯಾರೋ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಿರುವುದು ಕಾಣಿಸಿದೆ. ಈಕೆ ತಕ್ಷಣ ಕಮೋಡ್ ಮೇಲೆ ನಿಂತು ನೋಡಿದಾಗ ಯಾರೋ ಒಬ್ಬ ಯುವಕ ಪ್ಯಾಂಟ್ ಕಳಚಿ ತಾನು ಟಾಯ್ಲೆಟ್ ನಲ್ಲಿ ಗುಪ್ತವಾಗಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಗೊತ್ತಾಗಿದೆ. ಈ ಹಂತದಲ್ಲಿ ದೂರುದಾರೆ ಜೋರಾಗಿ ಬೊಬ್ಬೆ ಹೊಡೆದು ಮಹಿಳಾ ಟಾಯ್ಲೆಟ್ ನಲ್ಲಿ ಯುವಕನೊಬ್ಬ ಇದ್ದಾನೆ ಎಂದು ಹೇಳಿದ್ದಾಳೆ. ಆತ ಕೂಡಲೇ ಹೊರಗೆ ಬಂದು ಆಕೆಯ ಕ್ಷಮೆ ಕೇಳಿದ್ದಾನೆ. ಈ ವೇಳೆ ಪರಾರಿಯಾಗಲು ಯತ್ನಿಸಿದ ಇವನನ್ನು ಇತರ ಉದ್ಯೋಗಿಗಳು ಹಿಡಿದಿದ್ದಾರೆ. ಈತನ ಮೊಬೈಲ್ ಚೆಕ್ ಮಾಡಿದಾಗ ಅದರಲ್ಲಿ ದೂರುದಾರೆ ಮಹಿಳೆಯ ವಿಡಿಯೋ ಜೊತೆ ಇತರ ಮಹಿಳೆಯ ವಿಡಿಯೋಗಳು ಕೂಡ ಇರುವುದು ಪತ್ತೆಯಾಗಿದೆ. ಪೊಲೀಸರ ಬಂಧನದ ಬಳಿಕ ಇನ್ಪೋಸಿಸ್ ಅವನನ್ನು ಉದ್ಯೋಗದಿಂದ ವಜಾಗೊಳಿಸಿದೆ. ಯಾವುದೇ ರೀತಿಯ ಕಿರುಕುಳ ಸಹಿಸುವುದಿಲ್ಲ ಎಂದು ಕಂಪೆನಿ ಎಚ್ಚರಿಸಿದೆ.
ಸದ್ಯ ಉದ್ಯೋಗಿ ಮಹಾರಾಷ್ಟ್ರದ ಸಾಂಗ್ಲಿಯವನು ಎಂದು ಗೊತ್ತಾಗಿದ್ದ. ಮೂರು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ. ಇತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.