ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?

ಭಾರತೀಯ ಜನತಾ ಪಾರ್ಟಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಕುತೂಹಲ ಭಾಜಪಾ, ಕಾಂಗ್ರೆಸ್ ಹಾಗೂ ರಾಜಕೀಯ ವಲಯದಲ್ಲಿರುವ ಎಲ್ಲರಿಗೂ ಇದೆ. ಪಕ್ಷದಲ್ಲಿ ಸದ್ಯ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರದ್ದೇ ನಡೆಯುವುದಾದರೂ ಒಬ್ಬರು ರಾಷ್ಟ್ರೀಯ ಅಧ್ಯಕ್ಷರು ಪಕ್ಷಕ್ಕೆ ಅಗತ್ಯವಾಗಿರುವುದರಿಂದ ಜೆಪಿ ನಡ್ಡಾ ಅವರ ನಂತರ ಯಾರಿಗೆ ಪಟ್ಟ ಕಟ್ಟುತ್ತಾರೆ ಎನ್ನುವ ಕುತೂಹಲ ಇದ್ದೇ ಇತ್ತು. ಆದ್ದರಿಂದ ಅಳೆದು ತೂಗಿ ಮೋದಿ, ಶಾ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾರನ್ನು ಆಯ್ಕೆ ಮಾಡುತ್ತೇ ಎಂದು ತಿಂಗಳುಗಳಿಂದ ಕಾಯುತ್ತಿರುವ ಕಾರ್ಯಕರ್ತರಿಗೆ, ಮುಖಂಡರಿಗೆ ಯಥಾಪ್ರಕಾರ ಸರ್ ಪ್ರೈಸ್ ಕೂಡಲು ಮೋದಿ-ಶಾ ನಿರ್ಧರಿಸಿದಂತಿದೆ.
ಈ ಬಾರಿ ರಾಷ್ಟ್ರೀಯ ಕಮಾನು ಮಹಿಳೆಗೆ ಕೊಡಲು ಚಿಂತನೆ ನಡೆದಿರುವಂತೆ ಕಾಣುತ್ತದೆ. ಒಂದು ವೇಳೆ ಮಹಿಳೆಗೆ ಅವಕಾಶ ಕೊಡುವುದೇ ಆದರೆ ರಾಷ್ಟ್ರೀಯ ಮುಖಂಡರ ಮುಂದೆ ಇರುವ ಆಯ್ಕೆಗಳು ಯಾವುದು ಎಂದು ನೋಡುವುದಾದರೆ ಮೊದಲನೇಯದಾಗಿ ನಿರ್ಮಲಾ ಸೀತಾರಾಮನ್.
ನಿರ್ಮಲಾ ಸೀತಾರಾಮನ್ ಈಗಾಗಲೇ ಆರ್ಥಿಕ ಸಚಿವರಾಗಿದ್ದು, ತಮ್ಮದೇ ವರ್ಷಸ್ಸು ಕಂಡುಕೊಂಡಿದ್ದಾರೆ. ಖಡಕ್ ಶೈಲಿ ಹಾಗೂ ಸಾಮಾನ್ಯ ಮಹಿಳೆಯ ರೀತಿಯಲ್ಲಿ ತಮ್ಮನ್ನು ಬಿಂಬಿಸಿಕೊಂಡಿರುವ ಇವರು ರಾಷ್ಟ್ರೀಯ ಅಧ್ಯಕ್ಷರಾದರೆ ವಿದ್ಯಾವಂತೆ ಮಹಿಳೆಯೊಬ್ಬರು ಪಕ್ಷದಲ್ಲಿ ಉನ್ನತ ಸ್ಥಾನವನ್ನು ತಲುಪುವ ಸಂದೇಶ ಕೂಡ ತಳಮಟ್ಟದ ಕಾರ್ಯಕರ್ತರಿಗೆ ಹೋಗುತ್ತದೆ. ಇನ್ನು ಇವರಿಗೆ ಈಗಾಗಲೇ ನಾಯಕತ್ವದ ಗುಣ ಸಿದ್ಧಿಸಿರುವುದರಿಂದ ಇವರ ಆಯ್ಕೆ ಉತ್ತಮ ಎಂದು ಭಾವಿಸಲಾಗಿದೆ. ಇದರೊಂದಿಗೆ ಇವರು ದಕ್ಷಿಣ ಭಾರತದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವುದರಿಂದ ಇವರು ಎರಡೂ ಕಡೆಗೂ ಸಲ್ಲುತ್ತಾರೆ ಎಂಬ ಮಾತನ್ನು ಕೂಡ ಜನರ ಮಧ್ಯದಲ್ಲಿ ಬಿಡಬಹುದು. ಇನ್ನು ಬರಲಿರುವ ತಮಿಳುನಾಡು ವಿಧಾನಸಭೆಗೆ ಇವರನ್ನು ಪಕ್ಷ ಬಳಸಿಕೊಂಡು ಅಲ್ಲಿ ಒಂದಿಷ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ಮತ್ತೊಂದು ಹೆಸರು ದಕ್ಷಿಣ ಭಾರತದಿಂದಲೇ ಕೇಳಿಬರುತ್ತಿದೆ. ಅವರೇ ಪುರಂದೇಶ್ವರಿ. ಆಂಧ್ರಪ್ರದೇಶದ ರಾಜಮಂಡ್ರಿ ಸಂಸದೆ ದಗ್ಗುಬಾಟಿ ಪುರಂದೇಶ್ವರಿ ಅವರಿಗೆ ಕೇಂದ್ರಿಯ ಸಮಿತಿಗಳಲ್ಲಿ ಈಗಾಗಲೇ ಅನೇಕ ಸ್ಥಾನಮಾನಗಳನ್ನು ನೀಡುವ ಮೂಲಕ ಅವರಲ್ಲಿ ನಾಯಕತ್ವದ ಗುಣಗಳನ್ನು ಪಕ್ಷ ಬೆಳೆಸಿದೆ. ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡಿದರೆ ಪಶ್ಚಿಮ ಬಂಗಾಲದಲ್ಲಿ ದೀದಿಯ ವಿರುದ್ಧ ಖಡಕ್ ಆಗಿ ಮಾತನಾಡಲು ಓರ್ವ ನಾಯಕಿ ಪಕ್ಷಕ್ಕೆ ಸಿಕ್ಕಂತೆ ಆಗುತ್ತದೆ. ಇವರಿಗೆ ಉನ್ನತ ಸ್ಥಾನಮಾನ ಕೊಡುವ ಬಗ್ಗೆಯೂ ಪಕ್ಷ ಚಿಂತನೆ ನಡೆಸಿದೆ.
3. ವನತಿ ಶ್ರೀನಿವಾಸ್ ಎನ್ನುವ ಹೆಸರನ್ನು ಬಹುತೇಕ ಸಾಮಾನ್ಯ ಕಾರ್ಯಕರ್ತರು ಇಲ್ಲಿಯ ತನಕ ಕೇಳಿರಲಾರರು. ಆದರೆ ಮಹಿಳಾ ಕಾರ್ಯಕರ್ತರಿಗೆ ಇವರ ಹೆಸರಿನ ಪರಿಚಯ ಒಂದಿಷ್ಟು ಇದೆ. ಯಾಕೆಂದರೆ 2020 ರಲ್ಲಿ ಇವರನ್ನು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. 2022 ರಲ್ಲಿ ಅವರು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು. ಈ ಹಿನ್ನಲೆಯೊಂದಿಗೆ ಅವರು ತಮಿಳುನಾಡಿನಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಪಾಧ್ಯಕ್ಷೆ ಸೇರಿದಂತೆ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇವರ ಹೆಸರು ಮುನ್ನಲೆಗೆ ಬಂದಿರುವುದು ಕೂಡ ಹೌದು.
4. ಇನ್ನು ನಾಲ್ಕನೇ ಹೆಸರು ಸ್ಮೃತಿ ಇರಾನಿ. ಸ್ಮೃತಿ ಇರಾನಿಯವರಿಗೆ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಈ ಹಿಂದೆಯೂ ಚರ್ಚೆಯಾಗಿತ್ತು. ಅದಕ್ಕಾಗಿ ಅವರು ತಯಾರಿ ಕೂಡ ನಡೆಸಿದ್ದರು. ಆದರೆ ಘೋಷಣೆಯಾಗುವುದು ಪ್ರತಿ ಬಾರಿ ಮುಂದೂಡುತ್ತಾ ಬಂದು ಕೊನೆಗೆ ಅವರು ತಮ್ಮ ಮೂಲ ವೃತ್ತಿ ಕಿರುತೆರೆ ನಟನೆಗೆ ಹಿಂದಿರುಗಬೇಕಾಯಿತು. ಸದ್ಯ ಅವರು ನಟನೆ ಮತ್ತು ರಾಜಕೀಯ ಎರಡನ್ನೂ ತೂಗಿಸಿಕೊಂಡು ಹೋಗುತ್ತಿದ್ದರೂ ರಾಷ್ಟ್ರೀಯ ಅಧ್ಯಕ್ಷರಾದರೆ ನಟನೆಯನ್ನು ಬಿಡಬೇಕಾದೀತು. ಆದರೆ ಅಧ್ಯಕ್ಷಗಿರಿ ಸಿಗುವುದು ಬಹುತೇಕ ಅನುಮಾನ ಎಂದು ಅನಿಸಿದ ಕಾರಣ ಅವರು ನಟನೆಯನ್ನು ಆಯ್ದುಕೊಂಡಿರಬಹುದು ಎಂದು ಹೇಳಲಾಗುತ್ತದೆ. ಆದರೆ ಕೊನೆಯ ಕ್ಷಣದಲ್ಲಿ ಅವರ ಆಯ್ಕೆಯನ್ನು ಕೂಡ ಅಲ್ಲಗಳೆಯಲಾಗುವುದಿಲ್ಲ.