ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ – ಕೇರಳ ಹೈಕೋರ್ಟ್ ಆದೇಶ

ಕೇರಳ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಬಹಳ ದೂರಗಾಮಿ ಪರಿಣಾಮ ಬೀರಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ. ಪ್ರಾಪ್ತ ವಯಸ್ಸಿಗೆ ಬಂದ ಯುವಕ ಹಾಗೂ ಯುವತಿ ಪರಸ್ಪರ ಸಮ್ಮತಿಸಿ ನಡೆಸಿದ ಲೈಂಗಿಕ ಕ್ರಿಯೆ ಕಾಲಾಂತರದಲ್ಲಿ ಸಂಬಂಧದಲ್ಲಿ ಬಿರುಕು ಮೂಡಿದಾಗ ಅತ್ಯಾಚಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೇರಳದ ಮಾನ್ಯ ಉಚ್ಚ ನ್ಯಾಯಾಲಯ ಹೇಳಿದೆ. ಪ್ರಕರಣವೊಂದರಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವ ವಿಷಯದಲ್ಲಿ ಆರೋಪಿಯನ್ನು ಬಂಧಿಸಿ, ರಿಮಾಂಡ್ ನಲ್ಲಿ ಇಡುವ ಮೂಲಕ ಶಿಕ್ಷೆಯ ರೀತಿಯಲ್ಲಿ ಅದನ್ನು ಪರಿಗಣಿಸಬರದು. ಇಲ್ಲಿ ಇಬ್ಬರಿಗೂ ಪರಸ್ಪರ ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆ ನಡೆದಿದೆ. ನಂತರ ಸಂಬಂಧಗಳಲ್ಲಿ ಬಿರುಕು ಉಂಟಾದಾಗ ಇದನ್ನು ಅತ್ಯಾಚಾರದ ವ್ಯಾಪ್ತಿಯೊಳಗೆ ತರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯ 27 ವರ್ಷದ ಯುವಕನ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣವೊಂದರ ಸಂಬಂಧ ನಿರೀಕ್ಷಣಾ ಜಾಮೀನು ವಿಚಾರದಲ್ಲಿ ಈ ಆದೇಶ ನೀಡಿದೆ. ಆರೋಪಿಯ ಮೇಲೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 64 (1) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಎಂದು ಹೇಳಲಾಗುತ್ತಿದ್ದು, ಕೊಝಿಕೋಡ್ ಜಿಲ್ಲೆಯ ತಮಾರಶ್ಶೇರಿ ಎಂಬಲ್ಲಿ 2024, ನವೆಂಬರ್ 3 ಮತ್ತು 4 ರಂದು ಘಟನೆ ನಡೆದಿದೆ ಎನ್ನಲಾಗಿದೆ.
ಆರೋಪಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ದೂರುದಾರೆಯ ಒಪ್ಪಿಗೆಯಿಂದಲೇ ಎಲ್ಲವೂ ನಡೆದಿದೆ ಎಂದು ವಾದಿಸಿದ್ದರು. ದೂರುದಾರೆಯ ಹೇಳಿಕೆಯನ್ನು ಪರಿಶೀಲಿಸಿದ ನ್ಯಾಯಾಲಯ, ಆಕೆ ಸ್ವ ಇಚ್ಚೆಯಿಂದ ತಿರುವನಂತಪುರದಿಂದ ಕೋಝಿಕೋಡ್ ಗೆ ಪ್ರಯಾಣಿಸಿ ಎರಡು ರಾತ್ರಿ ಬೇರೆ ಬೇರೆ ಲಾಡ್ಜ್ ಗಳಲ್ಲಿ ಪುರುಷನೊಂದಿಗೆ ವಾಸ್ತವ್ಯ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಆಕೆ ಆತನೊಂದಿಗೆ ನಿರಂತರವಾಗಿ ಇನ್ಸ್ಟಾಗ್ರಾಂ ಹಾಗೂ ಸ್ಸ್ಯಾಪ್ ಶಾಟ್ ಮೂಲಕ ಸಂವಹನ ನಡೆಸಿದ್ದಾಳೆ. ಆದ್ದರಿಂದ ಮೇಲ್ನೋಟಕ್ಕೆ ಇಲ್ಲಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲಾಗಿದೆ ಎಂದು ಕಾಣುವುದಿಲ್ಲ. ಇಲ್ಲಿ ಅವಳ ಒಪ್ಪಿಗೆ ಇಲ್ಲದೇ ದೈಹಿಕ ಸಂಪರ್ಕ ನಡೆಸಿರುವ ಯಾವುದೇ ಕುರುಹುಗಳು ಇಲ್ಲ. ಆ ನಂತರದ ದಿನಗಳಲ್ಲಿ ಇಬ್ಬರ ನಡುವೆ ಸಂಬಂಧ ಹಳಸಿದ್ದು, ಆಗ ಪ್ರಕರಣ ದಾಖಲಿಸಿ ಆ ವ್ಯಕ್ತಿ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಿಕೆ ನೀಡುವುದು ಕಂಡುಬಂದಿದೆ ಎಂದು ನ್ಯಾಯಮೂರ್ತಿ ಬಿಚು ಕುರಿಯನ್ ಥೋಮಸ್ ಹೇಳಿದ್ದಾರೆ. ಇನ್ನು ಇಲ್ಲಿ ಮೋಸದಿಂದ ಮದುವೆಯ ಆಮಿಷ ಒಡ್ಡಿ ಲೈಂಗಿಕ ಕ್ರಿಯೆ ನಡೆಸಿರುವುದು ಎನ್ನಲು ಆಕೆ ಆಗಲೇ ವೈವಾಹಿಕ ಜೀವನದಲ್ಲಿ ಇದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
” ಇನ್ನು ಇಬ್ಬರು ಪ್ರಾಪ್ತ ವಯಸ್ಸಿನವರು ದೈಹಿಕ ಸಂಪರ್ಕ ನಡೆಸಿ ತರುವಾಯ ಸಂಬಂಧಗಳ ನಡುವೆ ಹಳಸಿ ಆಕೆ ಅತ್ಯಾಚಾರ ಪ್ರಕರಣ ದಾಖಲಿಸಿದರೆ ನೇರವಾಗಿ ಜಾಮೀನು ರದ್ದು ಮಾಡದೇ ಅದರ ಹಿಂದಿನ ಉದ್ದೇಶ ಅರಿತು, ವಿವೇಚನೆಯ ಆಧಾರದ ಮೇಲೆ ನ್ಯಾಯಾಲಯಗಳು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಯುವ ವ್ಯಕ್ತಿತ್ವಗಳು ನಾಶವಾಗುತ್ತದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ. “ಒಬ್ಬ ವಿವಾಹಿತ ಮಹಿಳೆ ಸ್ವಂತ ಇಚ್ಚೆಯಿಂದ ಪ್ರಯಾಣಿಸಿ, ವಿವಿಧ ಲಾಡ್ಜ್ ಗಳಲ್ಲಿ ತಂಗಿ ನಂತರ ಈಗ ಅವಳ ಸಮ್ಮತಿಯಿಲ್ಲದೇ ದೈಹಿಕ ಸಂಪರ್ಕ ನಡೆಯಿತು ಎಂದು ಹೇಳಲು ಸಾಧ್ಯವಿಲ್ಲ ” ಎಂದು ಕೋರ್ಟ್ ಹೇಳಿದೆ. ಆ ಮೂಲಕ ನ್ಯಾಯಾಧೀಶರು ಆರೋಪಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದ್ದಾರೆ.