20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!

ನಮ್ಮನ್ನು ಒಂದುಗೂಡಿಸಲು ಬಾಳಾ ಸಾಹೇಬ್ ಠಾಕ್ರೆಯವರಿಗೂ ಆಗಿರಲಿಲ್ಲ. ಆದರೆ ದೇವೇಂದ್ರ ಪಡ್ನವೀಸ್ ಅವರು ನಮ್ಮನ್ನು ಒಂದು ಮಾಡಿದರು ಎಂದು ಮಹಾರಾಷ್ಟ್ರ ನವನಿರ್ಮಾಣ್ ಸೇನಾಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. ಅವರು ತಮ್ಮ ಸೋದರ ಸಂಬಂಧಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರೊಂದಿಗೆ ಜಂಟಿಯಾಗಿ ಆಯೋಜಿಸಿದ್ದ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ನಾನು ಮತ್ತು ಉದ್ದವ್ 20 ವರ್ಷಗಳ ಬಳಿಕ ಒಂದಾಗುತ್ತಿದ್ದೇವೆ. ಇದಕ್ಕೆ ಬಾಳಾ ಸಾಹೇಬ್ ಠಾಕ್ರೆ ಪ್ರಯತ್ನ ಪಟ್ಟಿದ್ದರು. ಅವರಿಂದ ಆಗಿರಲಿಲ್ಲ, ಇದಕ್ಕಾಗಿ ಸಾವಿರಾರು ಜನರು ಪ್ರಯತ್ನಪಟ್ಟಿದ್ದರು. ಯಾರಿಂದಲೂ ಆಗಿರಲಿಲ್ಲ. ಅದೇ ದೇವೇಂದ್ರ ಪಡ್ನವೀಸ್ ಅವರಿಂದ ಸಾಧ್ಯವಾಯಿತು ಎಂದು ಅವರು ವ್ಯಂಗ್ಯಭರಿತ ಮಾತುಗಳಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ತಿವಿದರು.
ಬಾಳಾ ಸಾಹೇಬ್ ಠಾಕ್ರೆಯವರು ತಮ್ಮ ಉತ್ತರಾಧಿಕಾರಿಯಾಗಿ ಮಗ ಉದ್ದವ್ ಅವರನ್ನು ಘೋಷಿಸಿದ ಬಳಿಕ ರಾಜ್ ಠಾಕ್ರೆ ಶಿವಸೇನೆಯಿಂದ ಹೊರಗೆ ಬಂದು ಅಂತರ ಕಾಯ್ದುಕೊಂಡಿದ್ದರು. ಆದರೆ ಈಗ ಮರಾಠಿ ಅಸ್ಮಿತೆಯ ಕಾರಣದಿಂದ ಇವರಿಬ್ಬರೂ ಒಂದುಗೂಡುವ ಮೂಲಕ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿಂಧೆ ಬಣದ ಶಿವಸೇನೆಗೆ ಪ್ರಬಲ ಟಕ್ಕರ್ ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತದೆ. ಮರಾಠಿ ಅಸ್ಮಿತೆಯ ವಿಷಯವನ್ನೇ ಹಿಡಿದು ಬಾಳಾ ಠಾಕ್ರೆಯವರು ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಸ್ಥಾಪಿಸಿದ್ದರು. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮೂರನೇ ಭಾಷೆಯಾಗಿ ಹಿಂದಿಯನ್ನು ಕಲಿಸುವ ರಾಜ್ಯ ಸರಕಾರದ ನಿರ್ಧಾರ, ತದನಂತರ ನಡೆದ ಘರ್ಷಣೆಗಳು, ಸರಕಾರ ಈ ನಿರ್ಧಾರ ಹಿಂಪಡೆದಿರುವುದು, ಶಿವಸೇನೆಯ ಕಾರ್ಯಕರ್ತರಿಂದ ಹಲ್ಲೆ ರಾಷ್ಟ್ರದಾದ್ಯಂತ ಚರ್ಚೆಯಲ್ಲಿದ್ದವು.
ಉದ್ದವ್ ಠಾಕ್ರೆ ಮಾತನಾಡಿ ” ಭಾಷೆಯ ವಿಷಯ ಬಂದಾಗ ನಾವೆಲ್ಲರೂ ಒಂದಾಗಲೇಬೇಕು. ಹೌದು ನಮ್ಮನ್ನು ಗೂಂಡಾಗಳು ಎನ್ನಿ, ಏನು ಬೇಕಾದರೂ ಹೇಳಿ. ನ್ಯಾಯದ ಪರ ಹೋರಾಡುವಾಗ ನಾವು ಗೂಂಡಾಗಿರಿ ಮಾಡಿಯೇ ಮಾಡುತ್ತೇವೆ” ಎಂದು ಹೇಳಿದ್ದಾರೆ. ನಿಮಗೆ ಶಾಸಕಾಂಗದಲ್ಲಿ ಅಧಿಕಾರ ಇರಬಹುದು. ಆದರೆ ನಮಗೆ ಬೀದಿಬೀದಿಗಳಲ್ಲಿ ಶಕ್ತಿ ಇದೆ ಎಂದು ರಾಜ್ ಠಾಕ್ರೆ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನು ರಾಜಾ ಠಾಕ್ರೆ ಮರಾಠಿ ವಿಷಯದಲ್ಲಿ ನಮ್ಮ ಕಾರ್ಯಕರ್ತರು ಹೊಡಿಬಡಿ, ಏನು ಬೇಕಾದರೂ ಮಾಡಿ, ಆದರೆ ಯಾವುದೇ ವಿಡಿಯೋ ಮಾಡಿ ಸಾಕ್ಷಿ ಉಳಿಸಬೇಡಿ ಎಂದು ಗೌಪ್ಯವಾಗಿ ಸೂಚನೆ ಕೊಟ್ಟಿದ್ದಾರೆ ಎಂದು ಕೂಡ ಸುದ್ದಿ ಇದೆ.