ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!

“ನಾನು ಧರ್ಮಸ್ಥಳದಲ್ಲಿ ನೂರು ಮಹಿಳೆಯರ, ಹೆಣ್ಣುಮಕ್ಕಳ ಶವಗಳನ್ನು ಹೂತು ಹಾಕಿದ್ದೇನೆ. ನನಗೆ ಸೂಕ್ತ ರಕ್ಷಣೆ ಕೊಟ್ಟರೆ ಈ ಬಗ್ಗೆ ಸಮಗ್ರ ಮಾಹಿತಿ ನೀಡುತ್ತೇನೆ” ಎಂದು ಧರ್ಮಸ್ಥಳದ ಮಾಜಿ ಸ್ವಚ್ಛತಾ ಕಾರ್ಮಿಕ ಇತ್ತೀಚೆಗೆ ಹೇಳಿದ್ದರು. ಈಗ ಆತ ಪೊಲೀಸರ ಮುಂದೆ ತನ್ನ ವಕೀಲರ ಜೊತೆ ಹಾಜರಾಗಿದ್ದು, ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸೂಕ್ತ ಭದ್ರತೆಯೊಂದಿಗೆ ಹಾಜರು ಪಡಿಸಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿಕೊಳ್ಳಲಾಯಿತು.
ಆತ ತಾನು ಧರ್ಮಸ್ಥಳದ ಮಾಜಿ ಸ್ವಚ್ಛತಾ ಸಿಬ್ಬಂದಿ ಎಂದು ಹೇಳಿಕೊಂಡಿದ್ದು, ತನ್ನ ವಕೀಲರೊಂದಿಗೆ ಧರ್ಮಸ್ಥಳದ ಠಾಣೆಗೆ ಬಂದು ಜುಲೈ 4 ರಂದು ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಆತನನ್ನು ಬೆಳ್ತಂಗಡಿಯಲ್ಲಿ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಫಸ್ಟ್ ಕ್ಲಾಸ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.
ತನಗೆ ಸೂಕ್ತ ಭದ್ರತೆ ನೀಡಿದರೆ ತಾನು ಶವಗಳನ್ನು ಹೂತಿರುವ ಸ್ಥಳಗಳನ್ನು ತೋರಿಸಿ ಅಲ್ಲಿರುವ ಅಸ್ಥಿಪಂಜರಗಳನ್ನು ಹೊರಗೆ ತೆಗೆಯಲು ಸಹಕರಿಸುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ತಾನು ಗೌಪ್ಯವಾಗಿ ಅನೇಕ ವರ್ಷಗಳಿಂದ ಅನೇಕ ಶವಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಹೂತಿರುವುದಾಗಿ ತಿಳಿಸಿದ್ದ. ಲಿಖಿತ ದೂರನ್ನು ನೀಡಿರುವ ಈ ವ್ಯಕ್ತಿ ಜುಲೈ 3 ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಹಾಗೂ ಧರ್ಮಸ್ಥಳ ಠಾಣಾಧಿಕಾರಿಯವರಿಗೆ ದೂರು ನೀಡಿದ್ದ. ಇದರ ಆಧಾರದ ಮೇಲೆ ಜುಲೈ 4 ರಂದು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಇನ್ನು ದೂರುದಾರ ತಾನು ಇತ್ತೀಚೆಗೆ ಅಂತಹ ಒಂದು ಜಾಗಕ್ಕೆ ಭೇಟಿ ಕೊಟ್ಟಿದ್ದು, ಅಲ್ಲಿ ಈಗಲೂ ತಾನು ಹೂತಿರುವ ಶವಗಳ ಪಳೆಯುಳಿಕೆಗಳು ಇವೆ ಎಂದು ಫೋಟೋಗಳ ಸಹಿತ ಸಾಕ್ಷಿ ಒದಗಿಸಿದ್ದಾನೆ ಎಂದು ತಿಳಿದು ಬಂದಿದೆ. ತನ್ನ ಐಡೆಂಟಿಟಿಯನ್ನು ಗೌಪ್ಯವಾಗಿ ಇಡಬೇಕೆಂದು ದೂರುದಾರ ಪೊಲೀಸರಿಗೆ ಮನವಿ ಮಾಡಿದ್ದು, ಪೊಲೀಸರು ಆತನ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸದ್ಯ ದೂರುದಾರ ತನಗೆ ಕಾನೂನಿನ ರಕ್ಷಣೆಯೂ ಬೇಕೆಂದು ಕೋರಿದ್ದಾನೆ.
ಈ ವ್ಯಕ್ತಿ 1995 ರಿಂದ 2014 ರ ತನಕ ಧರ್ಮಸ್ಥಳದಲ್ಲಿ ಸ್ವಚ್ಚತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದಾನೆ ಎನ್ನಲಾಗುತ್ತಿದೆ. ನಂತರ ತನ್ನ ಜೀವಕ್ಕೆ ತೊಂದರೆ ಇದೆ ಎಂದು ಭಾವಿಸಿ ಆತ ತನ್ನ ಕುಟುಂಬದೊಂದಿಗೆ ಧರ್ಮಸ್ಥಳ ಬಿಟ್ಟು ತೆರಳಿದ ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರ ಪ್ರಕಾರ ” ದೂರುದಾರ ತಾನು ರಹಸ್ಯವಾಗಿ ಶವಗಳನ್ನು ವಿಲೇವಾರಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಈಗ ಪಾಪಪ್ರಜ್ಞೆಯಿಂದ ತಾನು ಮಾಡಿರುವ ಕೃತ್ಯಗಳನ್ನು ವಿವರವಾಗಿ ಹೇಳಿ ಅದರೊಂದಿಗೆ ಕೃತ್ಯ ನಡೆದಿರುವ ಸ್ಥಳವನ್ನು ತೋರಿಸುವುದಾಗಿ ಹೇಳುತ್ತಿದ್ದಾನೆ. ಅವನಿಗೆ ಮತ್ತು ಅವನ ಕುಟುಂಬಕ್ಕೆ ರಕ್ಷಣೆ ನೀಡಬೇಕಾಗಿ ಮನವಿ ಮಾಡಿದ್ದಾನೆ” ಎಂದು ತಿಳಿಸಿದ್ದಾರೆ.