7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!

ಮಳೆಗಾಲದ ದಿನಗಳಲ್ಲಿ ಹೆಚ್ಚು ಕಾಡುವ ಕಾಯಿಲೆಗಳಾದ ಡೆಂಘೀ, ಚಿಕೂನ್ ಗುನ್ಯಾ ನಿಯಂತ್ರಿಸುವ ದೃಷ್ಟಿಯಿಂದ ಸೊಳ್ಳೆಗಳನ್ನು ನಿರ್ಮೂಲನೆ ಮಾಡಲು ರಾಜ್ಯ ಸರಕಾರ ಮುಂದಾಗಿದೆ. ಇದಕ್ಕಾಗಿ ನೀರಿನ ಮೂಲಗಳಲ್ಲಿಯೇ ಲರ್ವಾ ನಿರ್ಮೂಲನೆಗೆ ರಾಜ್ಯಾದ್ಯಂತ 1500 ಸ್ವಯಂ ಸೇವಕರನ್ನು ನೇಮಿಸಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬರಿಗೆ ದಿನನಿತ್ಯ 400 ರೂ ಸಂಭಾವನೆ ನಿಗದಿಪಡಿಸಲಾಗಿದೆ. ಸಂಭಾವನೆ ಆರು ಕೋಟಿ ರೂಪಾಯಿ ಇತರ ಖರ್ಚುವೆಚ್ಚಗಳು ಸೇರಿಸಿ ಒಟ್ಟು 7.25 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಮೀಸಲಿಡಲು ಸರಕಾರ ಚಿಂತನೆ ನಡೆಸಿದೆ.
ಯೋಜನೆಯಡಿ ಲಾರ್ವಾ ನಿರ್ಮೂಲನೆಗೆ 100 ದಿನಗಳ ಕಾರ್ಯಸೂಚಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ 1500 ಸ್ವಯಂಸೇವಕರನ್ನು ನೇಮಿಸಲಾಗುತ್ತದೆ. ಇವರಿಗೆನೆ ಆರು ಕೋಟಿ ರೂಪಾಯಿ ಆರೋಗ್ಯ ಇಲಾಖೆ ನೀಡಲಿದೆ. ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪ್ರತಿ ಜಿಲ್ಲೆಗೆ ಒಬ್ಬರಂತೆ ಕೀಟ ಸಂಗ್ರಹಕಾರರನ್ನೂ ನೇಮಿಸಿಕೊಳ್ಳಲು ಸೂಚಿಸಲಾಗಿದೆ. ಈ ಕೀಟ ಸಂಗ್ರಹಕಾರರು ಅಂದರೆ ಇನ್ಸೆಕ್ಟ್ ಕಲೆಕ್ಟರ್ ವಿವಿಧ ಪ್ರದೇಶಗಳಿಂದ ಕೀಟ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಸಹಕರಿಸಲಿದ್ದಾರೆ. ಡೆಂಘೀ ಪರೀಕ್ಷೆಗೆ ಎಲಿಸಾ ಕಿಟ್, ಈಡಿಸ್ ಸೊಳ್ಳೆಯ ವೈರಾಣು ಪರೀಕ್ಷೆ, ಆರ್ ಟಿ – ಪಿಸಿಆರ್ ಪರೀಕ್ಷೆ ಸೇರಿ ವಿವಿಧ ವೆಚ್ಚಗಳಿಗೆ ಒಟ್ಟು 7.25 ಕೋಟಿ ರೂ ವೆಚ್ಚ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.
ಇವತ್ತಿನ ದಿನಗಳಲ್ಲಿ ದಿನಕ್ಕೆ ನಾಲ್ಕು ನೂರು ರೂಪಾಯಿ ಲೆಕ್ಕದಲ್ಲಿ 1500 ಜನ ಸ್ವಯಂ ಸೇವಕರು ಕೆಲಸಕ್ಕೆ ಸಿಗುತ್ತಾರಾ ಎನ್ನುವುದು ಕೂಡ ಪ್ರಶ್ನೆ. ನಗರದಲ್ಲಿ ಇದು ಕಷ್ಟಸಾಧ್ಯವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಿಕ್ಕಿದರೂ ಸಿಗಬಹುದು ಎಂದು ಹೇಳಲಾಗುತ್ತದೆ.