ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!

ಮ್ಯಾರಥಾನ್ ಎನ್ನುವುದು ಹೇಗಿರುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಗಂಟೆಗಟ್ಟಲೆ ನಿರಂತರವಾಗಿ ಓಡುವುದು ಎಂದರೆ ಅದರಷ್ಟು ಕಠಿಣ ಸವಾಲು ಬೇರೆ ಇದೆಯಾ? ಅದರಲ್ಲಿಯೂ ಹಿಮ ಪರ್ವತ, ಅಸಾಧ್ಯ ಬಿಸಿಲು, ಕಠಿಣವಾದ ಹಾದಿಗಳು ಹೀಗೆ ಪ್ರತಿ ಹೆಜ್ಜೆಯನ್ನು ಕೂಡ ಯಶಸ್ವಿಯಾಗಿ ಇಟ್ಟು ಗುರಿ ಮುಟ್ಟುವುದಿದೆಯಲ್ಲಾ ಅದು ಸುಲಭಸಾಧ್ಯ ಅಲ್ಲ. ಭಾರತದ ಸ್ಟಾರ್ ಅಲ್ಟ್ರಾ ಮ್ಯಾರಥಾನ್ ಓಟಗಾರ್ತಿ, ಕರ್ನಾಟಕದ ಅಶ್ವಿನಿ ಗಣಪತಿ ಭಟ್ ಜಪಾನಿನಲ್ಲಿ ನಡೆದ ಏಷ್ಯಾದಲ್ಲಿಯೇ ಅತ್ಯಂತ ಕ್ಲಿಷ್ಟಕರ ಓಟಗಳಲ್ಲಿ ಒಂದೆನಿಸಿರುವ ಡೀಪ್ ಜಪಾನ್ ಅಲ್ಟ್ರಾ ಟ್ರೇಲ್ ರೇಸ್ ನಲ್ಲಿ 10 ನೇ ಸ್ಥಾನ ಪಡೆಯುವ ಉತ್ತಮ ಸಾಧನೆ ಮಾಡಿದ್ದಾರೆ. ಇನ್ನು ಜಪಾನಿನವರ ಹೊರತಾಗಿ ಈ ಸ್ಪರ್ಧೆ ಮುಗಿಸಿದವರಲ್ಲಿ ಅಶ್ವಿನಿ ಮಾತ್ರ ಒಬ್ಬರು.
ಏಕೆಂದರೆ ಜಪಾನಿನ ಹಿಮದಿಂದ ಕೂಡಿದ ಪರ್ವತಗಳು, ಅಲ್ಲಿ ನಿರಂತರವಾಗಿ 45 ಗಂಟೆ 42 ನಿಮಿಷಗಳ ತನಕ ಓಡುವುದೆಂದರೆ ಅದು ಸುಲಭದ ಮಾತಲ್ಲ. ನಿದ್ದೆ ಇಲ್ಲದೇ ಬಹುತೇಕ ಎರಡು ಸಂಪೂರ್ಣ ದಿನ 173 ಕಿಮೀ ದೂರ ಓಡಿ ಅಶ್ವಿನಿ ಈ ಸ್ಪರ್ಧೇ ಪೂರೈಸಿದ್ದಾರೆ.
ಈ ಸ್ಪರ್ಧೇಯಲ್ಲಿ ಆರಂಭದಲ್ಲಿ 135 ಓಟಗಾರರು ಇದ್ದರೂ ಅಂತಿಮವಾಗಿ ಓಟ ಪೂರ್ತಿಗೊಳಿಸಿದ್ದು 62 ಮಂದಿ ಮಾತ್ರ. ಉಳಿದ 73 ಆಟಗಾರರು ಓಟವನ್ನು ಮುಗಿಸಲಾರದೇ ಹಿಂದೆ ಸರಿದುಬಿಟ್ಟಿದ್ದರು.
ಈ ಕಠಿಣ ಪಥ ಹೇಗಿತ್ತು ಎಂದರೆ ಓಟದ ಪಥದಲ್ಲಿ ಹಲವೆಡೆ ಹಗ್ಗ ಹಿಡಿದು ಮೇಲೆ ಹತ್ತಬೇಕಿತ್ತು. ಬಹುತೇಕ ಹಾದಿಯೂ ಕಿರಿದಾಗಿತ್ತು. ಹೀಗಾಗಿ ಓಟ ಇಲ್ಲಿ ಕಷ್ಟಕರ ಮಾತ್ರವಲ್ಲ, ಅಪಾಯಕಾರಿಯೂ ಆಗಿತ್ತು. 33 ಡಿಗ್ರಿ ಸೆಲ್ಸಿಯಸ್ ನಲ್ಲಿ ಕೂಡ ಓಡಬೇಕಾಗಿತ್ತು. ಅದು ಓಟಗಾರರನ್ನು ಹೈರಾಣಾಗಿಸಿತ್ತು. ಇದೆಲ್ಲವನ್ನು ದಾಟಿ ಅಶ್ವಿನಿ ಭಟ್ ಅವರು ತಮ್ಮ ಸಾಧನೆ ಮೆರೆದಿದ್ದಾರೆ.
ಇನ್ನು ಅಶ್ವಿನಿ ಅವರಿಗೆ ಮ್ಯಾರಥಾನ್ ಓಟದ ಸಾಕಷ್ಟು ಅನುಭವ ಇರುವುದರಿಂದ ಅವರು ಅಂತಿಮ ಹತ್ತರಲ್ಲಿ ಸ್ಥಾನ ಪಡೆಯುವಂತಾಯಿತು. ಇನ್ನು ಓಡುವಾಗ ಅವರೊಂದಿಗೆ ಸ್ವಯಂ ರಕ್ಷಣೆಗಾಗಿ ಕೆಲ ಪರಿಕರಗಳನ್ನು ಇಟ್ಟುಕೊಳ್ಳಬೇಕಾಗಿತ್ತು. ಅದರ ತೂಕವೇ ಅಂದಾಜು ಆರು ಕೆಜಿ ಇತ್ತು. ಅಶ್ವಿನಿ ಅವರು ಶಾಕಾಹಾರಿಯಾಗಿರುವುದರಿಂದ ತಮ್ಮ ಆಹಾರದ ಜೊತೆಗೆ ನೀರನ್ನು ಕೂಡ ಹೊತ್ತುಕೊಂಡು ಸಾಗಿದ್ದರು. ಒಟ್ಟು ಅಂದಾಜು 8 ಕೆಜಿಯಷ್ಟು ತೂಕದ ಬ್ಯಾಕ್ ಪ್ಯಾಕ್ ಹೊತ್ತು ಅಶ್ವಿನಿ ಓಡಿದರು.
ಕಳೆದ ಬಾರಿ ಬೆಂಗಳೂರಿನ ಹೊರವಲಯದಲ್ಲಿ ನಡೆದ ಬ್ಯಾಕ್ ಯಾರ್ಡ್ ಅಲ್ಟ್ರಾ ಸ್ಪರ್ಧೆಯಲ್ಲಿ 28 ಗಂಟೆಯಲ್ಲಿ 187.8 ಕಿ.ಮೀ ಓಡಿ ವಿಜೇತರಾಗಿದ್ದರು.