ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ಮನುಷ್ಯ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ್ ಮೂರ್ತಿ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕುಶಲೋಪರಿ ಮಾತನಾಡುತ್ತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸುವ ಸಂದರ್ಭ ನಡೆದ ಈ ಮಾತುಕತೆಯನ್ನು ” ಸ್ಫೂರ್ತಿಯ ಮಾಸ್ಟರ್ ಕ್ಲಾಸ್” ಎಂದು ತೇಜಸ್ವಿ ಸೂರ್ಯ ಹೇಳಿಕೊಂಡಿದ್ದಾರೆ.
ಈ ಎರಡು ಗಂಟೆಯ ಅವಧಿಯಲ್ಲಿ ಬೇರೆ ಬೇರೆ ವಿಷಯಗಳಾದ ನಗರಾಡಳಿತ, ಯುವಜನ ಕೌಶಲ್ಯ, ಸಿದ್ಧಾಂತ, ನಾಯಕತ್ವ, ಐಟಿ ಕ್ಷೇತ್ರ, ವಿಶ್ವ ಶಕ್ತಿಕೇಂದ್ರ ಬಗ್ಗೆ ಮಾರ್ಗದರ್ಶನ ತೆಗೆದುಕೊಳ್ಳಲಾಯಿತು ಎಂದು ತೇಜಸ್ವಿ ತಮ್ಮ ಏಕ್ಸ್ ನಲ್ಲಿ ಫೋಟೋ ಸಹಿತ ಬರೆದುಕೊಂಡಿದ್ದಾರೆ. ದೇಶದ ಲಕ್ಷಾಂತರ ಮಧ್ಯಮ ವರ್ಗದ ಯುವಜನರಿಗೆ ಆರ್ಥಿಕವಾಗಿ ಶಕ್ತಿ ನೀಡುವ ಕೆಲಸವನ್ನು ಇನ್ಫೋಸಿಸ್ ಮಾಡಿದೆ ಎಂದು ಬರೆದುಕೊಂಡಿರುವ ತೇಜಸ್ವಿ ಸೂರ್ಯ ಕೊನೆಗೆ “ನೀವು ಭಾರತದ ಯುವಜನತೆ ದೇಶದ ಅಭಿವೃದ್ಧಿಗಾಗಿ ವಾರಕ್ಕೆ 70 ಗಂಟೆ ಕೆಲಸ ಮಾಡುವ ಬಗ್ಗೆ ಗುರಿ ನೀಡಿದ್ದೀರಿ. ಅದರ ಬಗ್ಗೆ ಯುವಜನತೆ ಔದ್ಯೋಗಿಕ ಬದ್ಧತೆ ಹೊಂದಿದ್ದಾರಾ ಎಂದು ತೇಜಸ್ವಿ ಕೇಳಿದ್ದಕ್ಕೆ ತುಸು ನಕ್ಕು ಮೂರ್ತಿ ಹೀಗೆ ಹೇಳಿದ್ದಾರೆ ” ನನಗೆ ಗೊತ್ತಿರುವಂತೆ ವಾರಕ್ಕೆ 100 ಗಂಟೆ ಕೆಲಸ ಮಾಡುವ ವ್ಯಕ್ತಿ ಎಂದರೆ ಅದು ದೇಶದ ಪ್ರಧಾನಿ ಮೋದಿ ಮಾತ್ರ”
ನಾರಾಯಣ ಮೂರ್ತಿ 2023 ರಲ್ಲಿ ಪ್ರಥಮ ಬಾರಿಗೆ ವಾರಕ್ಕೆ 70 ಗಂಟೆ ಕೆಲಸ ಮಾಡಲು ಯುವಜನತೆಗೆ ಕರೆ ನೀಡಿದ್ದರು. ಅದರ ನಂತರ ಅವರು ಆಗಾಗ ಈ ವಿಷಯವನ್ನು ಎತ್ತುತ್ತಲೇ ಇದ್ದಾರೆ. ಈ ಬಗ್ಗೆ ಉದ್ಯೋಗ ಹಾಗೂ ಜೀವನವನ್ನು ಸಮತೋಲಿತ ಮಾಡದಿದ್ದರೆ ಬದುಕು ಕಷ್ಟ ಎನ್ನುವ ಬಗ್ಗೆನೂ ಸಾಕಷ್ಟು ಚರ್ಚೆಗಳು ಆಗುತ್ತಲೇ ಇವೆ. ಹಿಂದೆ ಐಟಿ ಉದ್ಯೋಗಿಗಳು ವಾರಕ್ಕೆ ಆರು ದಿನ ಕೆಲಸ ಮಾಡುತ್ತಿದ್ದರು. ಅದು ನಂತರ ಐದು ದಿನಕ್ಕೆ ಬಂದಿದೆ. ಭಾರತದ ಅಭಿವೃದ್ಧಿಗೆ ಯುವಜನಾಂಗ ತ್ಯಾಗ ಮಾಡಬೇಕೆ ವಿನ: ರಿಲ್ಯಾಕ್ಸ್ ಮಾಡಬಾರದು ಎಂದು ಅವರು ಹೇಳುತ್ತಾ ಬಂದಿದ್ದಾರೆ. ಮೋದಿಯವರು ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾ ಹಾರ್ಡ್ ವರ್ಕ್ ನಿಂದ ಮಾತ್ರ ಜಗತ್ತಿನಲ್ಲಿ ನಾವು ಮುಂದುವರೆಯಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದು 2024, ನವೆಂಬರ್ ನಲ್ಲಿ ಒಮ್ಮೆ ಮೂರ್ತಿಯವರು ಹೇಳಿದ್ದರು. ಆಗ ಬಂದ ವಿರೋಧದ ಸಂದರ್ಭದಲ್ಲಿ ” ನಾನು ನನ್ನ ಅಭಿಪ್ರಾಯ ಬದಲಿಸಲಾರೆ. ನನ್ನ ಕೊನೆಯವರೆಗೆ ಆ ಹೇಳಿಕೆಗೆ ನಾನು ಬದ್ಧ” ಎಂದು ಮೂರ್ತಿ ಹೇಳಿದ್ದರು.