ಎಸ್ ಐಟಿ ತನಿಖೆಯ ಮೊದಲೇ ವಿಘ್ನ? ತಂಡದಲ್ಲಿರಲು ಇಬ್ಬರು ಅಧಿಕಾರಿಗಳ ಹಿಂದೇಟು?

ಕರ್ನಾಟಕ ರಾಜ್ಯ ಸರಕಾರ ಧರ್ಮಸ್ಥಳದ ಮಾಜಿ ಸ್ವಚ್ಚತಾ ಕಾರ್ಮಿಕ ಎಂದು ಹೇಳಲಾದ ವ್ಯಕ್ತಿಯ ದೂರಿನ ಮೇರೆಗೆ ವಿಶೇಷ ತನಿಖಾ ತಂಡ ರಚಿಸಿ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಲು ಸಿದ್ಧತೆ ನಡೆಸಿತ್ತು. ನಾಲ್ಕು ಜನ ಐಪಿಎಸ್ ಶ್ರೇಣಿಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಎಸ್ ಐಟಿ ಮುಖ್ಯಸ್ಥರಾಗಿ ಡಾ. ಪ್ರಣವ್ ಮೊಹಂತಿ ಅವರೊಂದಿಗೆ ಅನುಚೇತ್, ಸೌಮ್ಯಲತಾ, ಜಿತೇಂದ್ರ ಕುಮಾರ್ ಅವರನ್ನು ಈ ತಂಡ ಒಳಗೊಂಡಿದೆ. ಈ ವಿಶೇಷ ತಂಡವು ಧರ್ಮಸ್ಥಳದಲ್ಲಿ ಕಳೆದ 20 ವರುಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ, ವಿದ್ಯಾರ್ಥಿನಿಯರ ಅಸ್ವಾಭಾವಿಕ ಸಾವಿನ ಬಗ್ಗೆ ತನಿಖೆ ನಡೆಸಲಿದೆ.
ಈ ತಂಡ ರಚನೆಯ ಬಗ್ಗೆ ರಾಜ್ಯ ಸರಕಾರದ ಎದುರು ರಾಜ್ಯ ಮಹಿಳಾ ಆಯೋಗ ಸಹಿತ ವಿವಿಧ ವಕೀಲರ ನಿಯೋಗದ ಒತ್ತಡ, ಮನವಿ ಎಲ್ಲವೂ ಇತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು “ರಾಜ್ಯ ಸರಕಾರದಿಂದ ಎಸ್ ಐಟಿ ರಚಿಸಲಾಗಿದೆ. ಮಹಿಳಾ ಆಯೋಗದ ಮನವಿಯನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ” ಎಂದು ತಮ್ಮ ಫೇಸ್ ಬುಕ್ಕಿನಲ್ಲಿ ಹೇಳಿಕೊಂಡಿದ್ದರು. ನಂತರ ಗೃಹ ಸಚಿವ ಡಾ. ಜಿ ಪರಮೇಶ್ವರ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೂಡ ಈ ಬಗ್ಗೆ ಸಮರ್ಥನೆ ಮಾಡಿದ್ದರು. ನೂರಾರು ಹೆಣ್ಣುಮಕ್ಕಳ ನಾಪತ್ತೆ, ಕೊಲೆಯ ಬಗ್ಗೆ ತನಿಖೆ ನಡೆಸಲು ಎಸ್ ಐಟಿ ರಚನೆ ಸೂಕ್ತವಾಗಿದೆ ಎನ್ನುವ ಅರ್ಥದ ಮಾತುಗಳನ್ನು ಹೇಳಿದ್ದರು. ಅತ್ತ ಧರ್ಮಸ್ಥಳ ದೇವಾಲಯದಿಂದಲೂ ಎಸ್ ಐಟಿ ರಚನೆಯನ್ನು ಸ್ವಾಗತಿಸಲಾಗಿತ್ತು. ಎಲ್ಲವೂ ಸುಸೂತ್ರವಾಗಿ ನಡೆದು ಇನ್ನೇಬೂ ಎಸ್ ಐಟಿ ತನಿಖೆ ಆರಂಭಿಸುತ್ತದೆ ಎಂದು ಹೇಳುವಾಗಲೇ ಹೊಸ ವಿಘ್ನವೊಂದು ಎದುರಾಗಿದೆ.
ಈ ತಂಡದಲ್ಲಿರುವ ನಾಲ್ವರು ಐಪಿಎಸ್ ಅಧಿಕಾರಿಗಳಲ್ಲಿ ಇಬ್ಬರು ಅನುಚೇತ್ ಹಾಗೂ ಸೌಮ್ಯಲತಾ ಅವರು ಈ ತಂಡದಿಂದ ಹಿಂದಕ್ಕೆ ಸರಿಯಲು ಬಯಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅವರು ತಮ್ಮನ್ನು ತಂಡದಿಂದ ಕೈಬಿಡುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ.
ತಮ್ಮನ್ನು ತಂಡದಿಂದ ಕೈಬಿಡಲು ಕೋರಿರುವ ಇಬ್ಬರು ಅಧಿಕಾರಿಗಳು ವೈಯಕ್ತಿಕ ಕಾರಣದಿಂದ ಹೊರಗುಳಿಯಲು ನಿರ್ಧರಿಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನೇಮಕಾತಿ ವಿಭಾಗದ ಡಿಐಜಿಪಿ ಆಗಿ ಅನುಚೇತ್ ನೇಮಕವಾಗಿದ್ದರು. ಇನ್ನು ಸೌಮ್ಯಲತಾ ಅವರು ಕೇಂದ್ರಿಯ ಸ್ಥಾನದಲ್ಲಿ ಡಿಸಿಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ಇಬ್ಬರು ಕೂಡ ಎಸ್ ಐಟಿ ತಂಡದಲ್ಲಿ ಇರಲು ಬಯಸುತ್ತಿಲ್ಲ ಎನ್ನುವುದು ತಿಳಿದುಬಂದಿದೆ. ತಮ್ಮ ಬದಲಿಗೆ ಬೇರೆಯವರನ್ನು ಇದಕ್ಕೆ ನೇಮಕ ಮಾಡಿ ಎಂದು ಅವರು ಕೋರಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಧರ್ಮಸ್ಥಳದ ವಿಷಯ, ದೇವರ ವಿಷಯ ಎನ್ನುವ ಕಾರಣಕ್ಕೆ ಅವರು ಹಿಂದೆ ಸರಿದ್ರಾ ಎನ್ನುವುದು ತಿಳಿದುಬರಬೇಕಿದೆ. ಯಾಕೆಂದರೆ ಯಾವುದೇ ಸವಾಲಿನ ಕೇಸಿನಲ್ಲಿ ಕೆಲಸ ಮಾಡಲು ಐಪಿಎಸ್ ಅಧಿಕಾರಿಗಳು ಉತ್ಸುಕರಾಗಿರುತ್ತಾರೆ. ಆದರೆ ಇದರಲ್ಲಿ ಯಾಕೆ ಹೀಗೆ ಅವರು ಹಿಂದೆ ಸರಿಯುತ್ತಿದ್ದಾರೆ ಎನ್ನುವುದು ಇಲ್ಲಿಯ ತನಕ ಸ್ಪಷ್ಟವಾಗುತ್ತಿಲ್ಲ. ಇದರಲ್ಲಿ ತನಿಖೆಗೆ ಇಳಿದರೆ ಏನಾದರೂ ಪ್ರಭಾವಿಗಳ ಒತ್ತಡ ಬಿದ್ದು ತನಿಖೆಗೆ ಹಿನ್ನಡೆ ಆಗುತ್ತದೆ ಎನ್ನುವುದು ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲಿ ಅಧಿಕಾರಿಗಳು ಯೋಚನೆಗೆ ಬಿದ್ದಿದ್ದಾರಾ ಎನ್ನುವ ಪ್ರಶ್ನೆಗಳು ಕೂಡ ಎದ್ದಿವೆ.