ರಾಜ್ಯದ ಚಿತ್ತ ಮಂಗಳೂರಿನ ಜ್ಯೋತಿ ವೃತ್ತದತ್ತ
ಮಂಗಳೂರು: ಶತಾಯ ಗತಾಯ ಮಂಗಳೂರು ಚಲೋ ಬೈಕ್ ರ್ಯಾಲಿ ಹಾಗೂ ಸಮಾರೋಪ ಸಮಾವೇಶ ಮಾಡಿಯೇ ಸಿದ್ಧ ಎಂದು ಪಣ ತೊಟ್ಟಿರುವ ಬಿಜೆಪಿ ನಾಯಕರು ಸೆ.7ರಂದು ಬೃಹತ್ ಸಂಖ್ಯೆಯಲ್ಲಿ ಮಂಗಳೂರು ಜ್ಯೋತಿ ವೃತ್ತದಲ್ಲಿ ಸೇರಲಿದ್ದು ಅಲ್ಲಿಂದ ನೆಹರು ಮೈದಾನದವರೆಗೆ ಸಾಗರೋಪಾದಿಯಾಗಿ ತೆರಳಿ ಸಮಾವೇಶ ನಡೆಸಲಿರುವುದಾಗಿ ತಿಳಿದು ಬಂದಿದೆ.
ಒಂದು ಕಡೆ ಮಂಗಳವಾರದಿಂದ ಕಾರ್ಯಕರ್ತರ ಹಾಗೂ ನಾಯಕರ ಬಂಧನದ ಮಧ್ಯೆ ರಣತಂತ್ರದ ಮೂಲಕ ಮಂಗಳೂರು ಚಲೋ ಯಶಸ್ವಿಗೆ ರೂಪುರೇಶೆ ಸಿದ್ಧಗೊಳ್ಳುತ್ತಿದೆ. ಈಗಾಗಲೇ ರಾಜ್ಯದ ಪ್ರಮುಖ ನಾಯಕರು ರಹಸ್ಯವಾಗಿ ಮಂಗಳೂರು ತಲುಪುವ ಯೋಜನೆ ಹಾಕಿದ್ದು ರಾಜ್ಯದ ಮೂಲೆ ಮೂಲೆಯಿಂದಲೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ತಂಡ ತಂಡವಾಗಿ ಮಂಗಳೂರು ತಲುಪುವ ನಿರೀಕ್ಷೆ ಇದೆ.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ‘ಯಾವುದೇ ಕಾರಣಕ್ಕೂ ಪೂರ್ವ ನಿರ್ಧರಿತ ಕಾರ್ಯಕ್ರಮ ಕೈ ಬಿಡುವ ಪ್ರಶ್ನೆಯೇ ಇಲ್ಲ. ಬೆದರಿಕೆಗೂ ಬಗ್ಗುವುದಿಲ್ಲ’ ಎಂಬ ಹೇಳಿಕೆ ಮಂಗಳೂರಿನ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ. ಸೆ.7ರಂದು ನಡೆಯುವ ಕಾರ್ಯಕ್ರಮದ ಯಶಸ್ಸಿಗೆ ಸಿದ್ಧತೆ ಆರಂಭಿಸಿದ್ದಾರೆ. ಮೈಸೂರು ಸಂಸದ ಹಾಗೂ ಯುವಮೋರ್ಚಾ ರಾಜ್ಯಾಾಧ್ಯಕ್ಷ ಪ್ರತಾಪ ಸಿಂಹರಂತೂ ರಾಜ್ಯದ ಪ್ರತಿ ಜಿಲ್ಲೆಯ ಸ್ಥಳಿಯ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯ ಸರಕಾರದ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದಾರೆ. ರಾಜ್ಯ ನಾಯಕರಾದ ಯಡಿಯೂರಪ್ಪ, ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ಸಿ.ಟಿ ರವಿ, ಆರ್ ಅಶೋಕ್ ಸೇರಿ ಹಲವು ನಾಯಕರೂ ಸೆ.7ರಂದು ಮಂಗಳೂರು ತಲುಪಲಿದ್ದಾರೆ.
ಮಂಗಳೂರಿನ ನಾನಾ ಭಾಗಗಳಿಂದ ತೆರಳಬೇಕಿದ್ದ ರ್ಯಾಲಿ ಕೊನೆಕ್ಷಣದಲ್ಲಿ ಬದಲಾವಣೆಯಾಗಿ ಪ್ರತಿ ಕಾರ್ಯಕರ್ತರಿಗೆ ಸೆ.7ರಂದು ಬೆಳಗ್ಗೆ 10 ಗಟೆಗೆ ಜ್ಯೋತಿ ವೃತ್ತದಲ್ಲಿ ಸೇರುವಂತೆ ಸ್ಥಳಿಯ ಮುಖಂಡರಿಂದ ಮಾಹಿತಿ ರವಾನೆಯಾಗಿದೆ. ಈಗಾಗಲೇ ರಾಜ್ಯವ್ಯಾಪಿ ತೀವ್ರ ಕೂತುಹಲ ಕೆರಳಿಸಿರುವ ಮಂಗಳೂರು ಚಲೋ ಪ್ರಯುಕ್ತ ಜ್ಯೋತಿ ವೃತ್ತದಲ್ಲಿ ಬಿಜೆಪಿ ಬ್ರಹತ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ. ಎಲ್ಲರೂ ನಾಳೆ ನಡೆಯುವ ಕಾರ್ಯಕ್ರಮ ಎದುರು ನೋಡುತ್ತಿದ್ದಾರೆ.
ಈಗಾಗಲೇ ಮಂಗಳೂರಿಗೆ ಆಗಮಿಸುವ ಬಿಜೆಪಿ ಕಾರ್ಯಕರ್ತರಿಗೆ ಯಾವುದೇ ತೊಂದರೆಯಾದರೂ ತಮ್ಮನ್ನು ಸಂಪರ್ಕಿಸಿ ಎಂಬ ಮಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಢಾರಿಯವರ ವಿಡಿಯೋ ವೈರಲ್ ಆಗಿದೆ. ಗೌರಿ ಲಂಕೇಶ ಹತ್ಯೆ ಕೊಂಚ ಸಮಯ ಜನರ ಗಮನ ಬೇರೆಡೆ ಸೆಳೆದಿದ್ದರೂ ಮಂಗಳೂರು ಚಲೋ ಈಗ ಮತ್ತೆ ಕಾವೇರುವ ಲಕ್ಷಣಗಳು ಗೋಚರಿಸಿವೆ.
Leave A Reply