ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ – ವಿರೋಧ ಚರ್ಚೆ!

ನಾಡಹಬ್ಬ ದಸರಾವನ್ನು ಉದ್ಘಾಟನೆ ಮಾಡಲು ರಾಜ್ಯ ಸರಕಾರಗಳು ಆಯ್ಕೆ ಮಾಡುವ ಗಣ್ಯ ವ್ಯಕ್ತಿ ಯಾರು ಎನ್ನುವ ಕುತೂಹಲ ಪ್ರತಿ ಬಾರಿ ಇದ್ದೇ ಇರುತ್ತದೆ. ಅದು ಈ ಬಾರಿಯೂ ಇತ್ತು. ರಾಜ್ಯದ ಸಿದ್ಧರಾಮಯ್ಯನವರ ಆಡಳಿತದ ಸರಕಾರ ಈ ಬಾರಿ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಬಾನು ಮುಷ್ತಾಕ್ ಅವರ ಆಯ್ಕೆ ಬಗ್ಗೆ ಅಪಸ್ವರಗಳು ಕೇಳಿಬಂದಿವೆ.
ವಿರೋಧ ಎತ್ತಿರುವ ಭಾರತೀಯ ಜನತಾ ಪಾರ್ಟಿಯ ಮುಖಂಡರ ವಾದ ಮತ್ತು ಆಯ್ಕೆ ಮಾಡಿರುವ ಸರಕಾರದ ವಾದ ಎನು ಎಂಬುದನ್ನು ಈಗ ನೋಡುತ್ತಾ ಬರೋಣ. ಬಿಜೆಪಿ ಮುಖಂಡರ ಪ್ರಕಾರ ” ಮೈಸೂರು ದಸರಾ ಒಂದು ಧಾರ್ಮಿಕ ಕಾರ್ಯಕ್ರಮ. ಅದನ್ನು ಮೂರ್ತಿ ಪೂಜೆ ಒಪ್ಪದಂತಹ ಮತಧರ್ಮದಿಂದ ಬಂದವರಿಂದ ಮಾಡುವುದು ಎಷ್ಟು ಸರಿ” ಎಂದು ಹೇಳುತ್ತಿದ್ದಾರೆ. ಈ ವಿಷಯವನ್ನು ಮೊದಲಿಗೆ ಬಹಳ ದೊಡ್ಡ ರೀತಿಯಲ್ಲಿ ಎತ್ತಿಹಿಡಿದವರು ಮೈಸೂರಿನ ನಿಕಟಪೂರ್ವ ಸಂಸದ ಪ್ರತಾಪ್ ಸಿಂಹ. ಅವರ ಮಾತು ಎಷ್ಟು ಸ್ಪಷ್ಟವಾಗಿತ್ತು ಎಂದರೆ ಬಾನು ಮುಷ್ತಾಕ್ ಅವರು ಸಾಹಿತ್ಯ ಸಮ್ಮೇಳನವನ್ನು ಬೇಕಾದರೆ ಉದ್ಘಾಟಿಸಲಿ, ಆದರೆ ಪಕ್ಕಾ ಧಾರ್ಮಿಕ ಕಾರ್ಯಕ್ರಮ ನಾಡದೇವಿ ಶ್ರೀ ಚಾಮುಂಡೇಶ್ವರಿಯ ಹಬ್ಬವನ್ನು ಉದ್ಘಾಟಿಸುವುದು ಎಷ್ಟು ಸರಿ ಎಂದು ಕೇಳಿದ್ದಾರೆ.
ಅವರು ಈ ವಿಷಯ ಎತ್ತಿದ ನಂತರ ಬಿಜೆಪಿ ಮುಖಂಡರು ಎಚ್ಚೆತ್ತು ಒಂದೊಂದಾಗಿ ವಿರೋಧ ಮಾಡುತ್ತಿದ್ದಾರೆ. ಈ ನಡುವೆ ಮೈಸೂರಿನ ಈಗಿನ ಸಂಸದ ಯದುವೀರ್ ಓಡೆಯರ್ ಅವರು “ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಮಾಡಿರುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ದಸರಾ ಉತ್ಸವ ಒಂದು ಧಾರ್ಮಿಕ ಪರಂಪರೆ. ಈ ಪರಂಪರೆ ಹಾಗೂ ಧಾರ್ಮಿಕ ಭಾವನೆಗೆ ದಕ್ಕೆಯಾಗದಂತೆ ಉದ್ಘಾಟನೆ ಮಾಡಿದರೆ ಮತ್ತು ತಾಯಿ ಚಾಮುಂಡಿಗೆ ಗೌರವ ಕೊಡುತ್ತೇನೆ ಎಂದು ಬಾನು ಹೇಳಿದರೆ ಸಮಸ್ಯೆಯೂ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಸರಿಯಾಗಿ ಚಾಮುಂಡೇಶ್ವರಿ ಹಬ್ಬ ನನಗೂ ಪ್ರಿಯ ಎಂದು ಬಾನು ಮುಷ್ತಾಕ್ ಹೇಳಿ ಕಲಾವಿದೆಯೊಬ್ಬರು ನೀಡಿರುವ ಬಾಗಿನ ಸ್ವೀಕರಿಸಿ ಅವರಿಗೂ ಹೂ, ಬಳೆ, ಅರಿಶಿನ – ಕುಂಕುಮ ನೀಡಿ ಬೀಳ್ಕೊಡುವ ಕೊಟ್ಟಿದ್ದಾರೆ.
ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ” ಬಾನು ಮುಷ್ತಾಕ್ ಜೊತೆ ಬುಕರ್ ವಿಜೇತೆ ದೀಪಾ ಭಸ್ತಿಗೂ ಆಹ್ವಾನ ನೀಡಬೇಕು. ಅದನ್ನು ಯಾಕೆ ರಾಜ್ಯ ಸರಕಾರ ಮಾಡಿಲ್ಲ” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಡಳಿತ ಪಕ್ಷ ಕಾಂಗ್ರೆಸ್ ಮುಖಂಡರು ” ನಾವು ಖ್ಯಾತ ಕವಿ ನಿಸಾರ್ ಅಹ್ಮದ್ ಅವರಿಂದಲೂ ಉದ್ಘಾಟನೆ ಮಾಡಿದ್ದೇವೆ. ಆಗ 2017 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಬಿಜೆಪಿ ಯಾಕೆ ವಿರೋಧ ಮಾಡಲಿಲ್ಲ” ಎಂದು ಕೇಳಿದ್ದಾರೆ. ಒಟ್ಟಿನಲ್ಲಿ ದಸರಾದಂತಹ ಪವಿತ್ರ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸುವ ವಿಷಯದಲ್ಲಿ ಪರ – ವಿರೋಧಗಳು ಕಂಡು ಬರುತ್ತಿರುವುದು ಎಷ್ಟು ಸರಿ ಎನ್ನುವುದು ನಾಡಿನ ಪ್ರಜ್ಞಾವಂತರ ಪ್ರಶ್ನೆ. ಇಂತಹ ವಿಷಯ ವಿವಾದ ಆಗುತ್ತೆ ಮತ್ತು ಮುಸ್ಲಿಮರನ್ನು ಒಲೈಸಿ ಅವರ ಪ್ರೀತಿಗಿಟ್ಟಿಸಲು ಇದೊಂದು ದಾರಿ ಎನ್ನುವುದು ಕಾಂಗ್ರೆಸ್ಸಿಗೆ ಗೊತ್ತಿದೆ.