ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ – ಸಿಎಂ ರೇವಂತ್ ರೆಡ್ಡಿ

ಈಗ ದೇಶದಲ್ಲಿ ಪ್ರಸ್ತುತ ಇರುವ ಟ್ರೆಂಡ್ ಅಂದರೆ ಗ್ಯಾರಂಟಿ ಘೋಷಿಸಿ, ಅಧಿಕಾರಕ್ಕೆ ಬನ್ನಿ – ಇದರಲ್ಲಿ ಯಾವ ರಾಜಕೀಯ ಪಕ್ಷವೂ ಹೊರತಾಗಿಲ್ಲ. ಆದರೆ ಕರ್ನಾಟಕದ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಈ ಗ್ಯಾರಂಟಿ ವಿಷಯದಲ್ಲಿ ಜನರನ್ನು ಓಲೈಸಿ ಅಧಿಕಾರಕ್ಕೂ ಬಂದಿರುವುದರಿಂದ ಉಳಿದ ರಾಜ್ಯಗಳಿಗೆ ಈ ವಿಷಯದಲ್ಲಿ ಕರ್ನಾಟಕವೇ ರೋಲ್ ಮಾಡೆಲ್ ಆಗಿದೆ. ತೆಲಂಗಾಣ ಕಾಂಗ್ರೆಸ್ ಕೂಡ ಕರ್ನಾಟಕದ ರೀತಿ ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ವಿಷಯವೂ ಎಲ್ಲರಿಗೂ ತಿಳಿದಿದೆ. ತೆಲಂಗಾಣದ ಕಾಂಗ್ರೆಸ್ ಸರಕಾರ ಇದೀಗ ಬೊಕ್ಕಸ ಬರಿದು ಮಾಡಿಕೊಂಡು ಒದ್ದಾಡುತ್ತಿರುವುದನ್ನು ವಿರೋಧ ಪಕ್ಷಗಳಲ್ಲ, ಸ್ವತ: ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿಯವರೇ ಬಹಿರಂಗಪಡಿಸಿದ್ದಾರೆ.
ಸರಕಾರದ ಬೊಕ್ಕಸ ಪೂರ್ತಿ ಬತ್ತಿಹೋಗಿದ್ದು, ಮಾರಾಟ ಮಾಡಿ ದೇಣಿಗೆ ಎತ್ತಲು ಸಹ ಸರಕಾರದ ಬಳಿ ಭೂಮಿಯಿಲ್ಲ ಎಂದು ಸಿಎಂ ಅವಲತ್ತುಕೊಂಡಿದ್ದಾರೆ. ಉಸ್ಮಾನಿಯಾ ವಿಶ್ವವಿದ್ಯಾನಿಲಯದ ವಿವಿಧ ಕಟ್ಟಡಗಳ ಲೋಕಾರ್ಪಣೆ ಹಾಗೂ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು ” ತೆಲಂಗಾಣ ಸರಕಾರದ ಬೊಕ್ಕಸ ಪೂರ್ತಿ ಒಣಗಿಹೋಗಿದೆ. ಸರಕಾರದಲ್ಲಿ ಮಾರಾಟ ಮಾಡಲು ಮತ್ತು ಹಣವನ್ನು ಸಂಗ್ರಹಿಸಲು ಯಾವುದೇ ಭೂಮಿಯೂ ಲಭ್ಯವಿಲ್ಲ” ಎಂದು ಹೇಳಿದರು.
ಈ ಹಿಂದೆಯೂ ಸರಕಾರ ಆರ್ಥಿಕವಾಗಿ ಕುಸಿದಿರುವ ಬಗ್ಗೆ ಮಾಹಿತಿ ನೀಡಿದ್ದ ರೇವಂತ್ ರೆಡ್ಡಿ ” ಚುನಾವಣೆಯಲ್ಲಿ ಗೆದ್ದು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಹಣಕಾಸಿನ ಬಗ್ಗೆ ನಿಜವಾದ ತಿಳುವಳಿಕೆ ಬಂತು. ನಾವೇ ಘೋಷಿಸಿದ ಗ್ಯಾರಂಟಿಗೆ ಮೀಸಲಾಗಿರಿಸಲು ಸರಕಾರದ ಬಳಿ ದುಡ್ಡಿಲ್ಲ. ಗ್ಯಾರಂಟಿ ಬಗ್ಗೆ ದೇಶಾದ್ಯಂತ ಚರ್ಚೆಯಾಗಬೇಕು” ಎಂದಿದ್ದರು. ಅಲ್ಲದೇ ಕೇಂದ್ರ ಸರಕಾರದ ಬಳಿ ಹಣ ಕೇಳಲು ಹೋದರೆ ಅಲ್ಲಿ ಯಾರೂ ನಾವು ಬಂದಾಗ ಬಾಗಿಲು ತೆರೆಯುತ್ತಿಲ್ಲ.” ಎಂದು ಹೇಳಿ ಆರೋಪ ಕೂಡ ಮಾಡಿದ್ದರು.
ತೆಲಂಗಾಣ ಸರಕಾರ ಆರು ಗ್ಯಾರಂಟಿ ನೀಡುತ್ತಿದ್ದು, ಮಹಿಳೆಯರಿಗೆ ತಿಂಗಳಿಗೆ 2500 ರೂ, 500 ರೂಗೆ ಸಿಲೆಂಡರ್, ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ, ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ವೃದ್ಧರು, ವಿಧವೆಯರು, ಅಂಗವಿಕರು, ಬೀಡಿ ಕಾರ್ಮಿಕರು, ಒಂಟಿ ಮಹಿಳೆಯರು, ಕಲ್ಲು ಕ್ವಾರಿಗಳು ಮತ್ತು ಕೈಮಗ್ಗ ಕಾರ್ಮಿಕರು, ಎಚ್ ಐವಿ ಪೀಡಿತರು, ಡಯಾಲಿಸಿಸ್ ರೋಗಿಗಳಿಗೆ 4 ಸಾವಿರ ರೂ ಮಾಸಿಕ ಪಿಂಚಣಿ ನೀಡುವ ಭರವಸೆ ನೀಡಲಾಗಿತ್ತು. ಗ್ಯಾರಂಟಿ ಎನ್ನುವ ಸಕ್ಕರೆ ತಿನ್ನುವಾಗ ಖುಷಿ ನೀಡಬಹುದು, ಆದರೆ ಮುಂದೆ ಯಾವ ರೀತಿಯಲ್ಲಿ ನಮ್ಮ ದೇಹ (ದೇಶ)ದಲ್ಲಿ ಕಾಯಿಲೆ ತರಲಿದೆ ಎನ್ನುವುದರ ಬಗ್ಗೆ ಶೀಘ್ರ ಒಂದು ನಿರ್ಧಾರಕ್ಕೆ ನಾವು ಬರದಿದ್ದರೆ ಆಪತ್ತು ಗ್ಯಾರಂಟಿ!