ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!

ಭಾರತದಲ್ಲಿ ಬೀದಿನಾಯಿಗಳ ಹಾವಳಿ ಸಿಕ್ಕಾಪಟ್ಟೆ ಜಾಸ್ತಿಯಾಗಿ ದಾರಿಹೋಕರಿಗೆ ಕಚ್ಚಿ ಹೊಲಿಗೆಗಳನ್ನು ಹಾಕಿಸಿಕೊಂಡು ನಂತರ ಅವರು ಅನುಭವಿಸುವ ಕಥೆಗಳ ಬಗ್ಗೆ ಎಷ್ಟೇ ಸುದ್ದಿಗಳನ್ನು ಮಾಡಿದರೂ ಇಂತಹ ಘಟನೆಗಳು ನಿಲ್ಲುವುದು ಮಾತ್ರ ಕಾಣಿಸುತ್ತಿಲ್ಲ. ಇದಕ್ಕೆ ದೇಶದ ಯಾವ ಪ್ರದೇಶಗಳು ಕೂಡ ಹೊರತಾಗಿಲ್ಲ. ಬೆಂಗಳೂರಿನಲ್ಲಿಯೂ ಬೀದಿನಾಯಿಗಳ ಸಮಸ್ಯೆ ಕಡಿಮೆ ಏನಲ್ಲ. ಆದರೆ ಇವುಗಳ ನಸೀಬು ಏನೆಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಬೀದಿನಾಯಿಗಳ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ ಇಟ್ಟುಕೊಂಡಿದೆ. ಅವುಗಳಿಗೆ ಬಾಡೂಟದ ವ್ಯವಸ್ಥೆಯನ್ನು ಮಾಡಿದ ಬಗ್ಗೆ ಈಗಾಗಲೇ ನಿಮಗೆ ವಿಷಯ ಗೊತ್ತಿರುತ್ತದೆ. ಅದಕ್ಕಾಗಿ ಬಿಬಿಎಂಪಿ ಪ್ರತ್ಯೇಕವಾದ ನಿಧಿಯನ್ನು ಕೂಡ ಮೀಸಲಿಟ್ಟಿದೆ. ಈಗ ಬಿಬಿಎಂಪಿ ಒಂದು ಹೆಜ್ಜೆ ಮುಂದೆ ಹೋಗಿದೆ. ಬೀದಿನಾಯಿಗಳಿಗೆ ವಸತಿ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ.
ಬೆಂಗಳೂರಿನ ಬೀದಿನಾಯಿಗಳ ಹೆಚ್ಚಳದಿಂದ ಅವುಗಳಿಂದ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ವಿಧಾನಸೌಧಕ್ಕೂ ತಟ್ಟಿದೆ. ಇದರ ನಿಯಂತ್ರಣಕ್ಕೆ ಶೆಲ್ಟರ್ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಕುರಿತು ವಿಧಾನಸಭೆ ಕಾರ್ಯಾಲಯದಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ” ವಿಧಾನಸೌಧ ಆವರಣದಲ್ಲಿ 53 ನಾಯಿಗಳಿವೆ. ಅವುಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ. ಕೆಲವೊಮ್ಮೆ ವಿಧಾನಸೌಧದೊಳಗೂ ಬರುತ್ತವೆ. ಶಾಸಕರು ವಾಕಿಂಗ್ ಗೆ ಬಂದರೆ, ಶಾಲಾ ಮಕ್ಕಳು ಸೇರಿ ಸಾರ್ವಜನಿಕರು ವಿಧಾನಸೌಧ ವೀಕ್ಷಣೆಗೆ ಬಂದಾಗ ಭಯಪಡುವಂತಾಗುತ್ತಿದೆ. ಹೀಗಾಗಿ ಎಲ್ಲೆಂದರಲ್ಲಿ ಓಡಾಡುವುದನ್ನು ತಡೆಯಲು ಅವುಗಳ ಓಡಾಟಕ್ಕೆ ವಿಧಾನಸೌಧದ ಆವರಣದಲ್ಲಿನ ಒಂದು ಸ್ಥಳವನ್ನು ನಿಗದಿ ಮಾಡಲು ನಿರ್ಧರಿಸಲಾಗಿದೆ” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬೀದಿನಾಯಿಗಳ ಸಮಸ್ಯೆ ಈಗ ರಾಜ್ಯವನ್ನು ಆಡಳಿತ ನಡೆಸುತ್ತಿರುವ ಬುಡಕ್ಕೂ ಬಂದಿರುವುದು ಅದರ ಗಂಭೀರತೆಯ ಅರಿವು ಸರಕಾರಕ್ಕೆ ಆಗಿದೆ ಎನ್ನುವುದು ದಿಟ. ಈ ಹಂತದಲ್ಲಿ ಸರಕಾರ ಕೇವಲ ವಿಧಾನಸೌಧದ ಆವರಣದಲ್ಲಿ ಉಂಟಾಗಿರುವ ಬೀದಿನಾಯಿಗಳ ಉಪಟಳದ ಬಗ್ಗೆ ಮಾತ್ರ ಕ್ರಮ ಕೈಗೊಳ್ಳುತ್ತದೆಯೋ ಅಥವಾ ರಾಜ್ಯದ ಬೀದಿನಾಯಿಗಳ ಒಟ್ಟು ಸಮಸ್ಯೆಯ ಬಗ್ಗೆ ಏನಾದರೂ ಮಾಡುತ್ತದೆಯೋ ಎನ್ನುವುದನ್ನು ಕಾಲವೇ ಉತ್ತರಿಸಬೇಕು.