ಯೋಗಿ ದೇಶದ ನಂ 1 ಸಿಎಂ – ಇಂಡಿಯಾ ಟುಡೇ ಸಮೀಕ್ಷೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಶದ ನಂ 1 ಜನಪ್ರಿಯ ಮುಖ್ಯಮಂತ್ರಿ ಎಂದು ಇಂಡಿಯಾ ಟುಡೇ ಮೂಡ್ ಆಫ್ ದಿ ನೇಶನ್ ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯಲ್ಲಿ ಯೋಗಿ ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸ್ಥಾನ ಪಡೆದಿದ್ದಾರೆ.
ಇಂಡಿಯಾ ಟುಡೇ ಸಿವೋಟರ್ ನಡೆಸಿದ ಸಮೀಕ್ಷೆಯಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಶೇ 36 ರಷ್ಟು ಜನರು ಮೆಚ್ಚುಗೆ ಸೂಚಿಸಿ ಅನುಮೋದನೆ ನೀಡಿದ್ದಾರೆ. ಅನಂತರ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಶೇ 12.5, ಕಳೆದ ವರ್ಷ ಸಿಎಂ ಗಾದಿ ಅಲಂಕರಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಶೇ 7.3 ರಷ್ಟು ಮಂದಿ ಮೆಚ್ಚಿದ್ದಾರೆ.
ಉಳಿದಂತೆ ಬಿಹಾರದ ನಿತೀಶ್ ಕುಮಾರ್ (ಶೇ 4.3), ತಮಿಳು ನಾಡು ಸಿಎಂ ಸ್ಟಾಲಿನ್ ( ಶೇ 3.8), ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (ಶೇ 3), ತೆಲಂಗಾಣ ಸಿಎಂ ರೇವಂತ್ ರೆಡ್ಡಿ (ಶೇ 2.8), ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ (ಶೇ 2.7), ಅಸ್ಸಾಂ ಸಿಎಂ ಹೀಮಂತ್ ಬಿಸ್ವಾ ಶರ್ಮಾ (ಶೇ 2.1), ಮಹಾರಾಷ್ಟ್ರ ಸಿಎಂ ದೇವೇಂದ್ರ ಪಡ್ನವೀಸ್ (ಶೇ 1.7) ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಯೋಗಿ ಆದಿತ್ಯನಾಥ ಅವರು ದೇಶದ ಭವಿಷ್ಯದ ಪ್ರಧಾನ ಮಂತ್ರಿಯಾಗುವ ದಾರಿಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದೇ ಹೇಳಬಹುದು. ನರೇಂದ್ರ ಮೋದಿಯವರ ಬಳಿಕ ಯಾರು ಎನ್ನುವ ಪ್ರಶ್ನೆಗೆ ಉತ್ತರ ಈಗ ದೊರಕಿದಂತಿದೆ.
ದೇಶದ ಗೃಹ ಸಚಿವರಾದ ಅಮಿತ್ ಶಾ ಅವರು ಕೂಡ ಮೋದಿಯವರ ನಂತರ ದೇಶದ ಬಹುಮುಖ್ಯ ಸ್ಥಾನವಾಗಿರುವ ಪ್ರಧಾನ ಮಂತ್ರಿ ಹುದ್ದೆಯನ್ನು ನಿರ್ವಹಿಸಲು ಶಕ್ತರಾಗಿದ್ದಾರೆ. ಇನ್ನೊಂದೆಡೆ ಯೋಗಿ ಅವರಿಗೂ ದೇಶದ ಪ್ರಮುಖ ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಜನಮೆಚ್ಚುಗೆ ದೊರಕಿದೆ. ಈ ನಿಟ್ಟಿನಲ್ಲಿ ಇಂತಹ ಸಮೀಕ್ಷೆಗಳು ಇಡೀ ದೇಶದ ಜನರ ನಾಡಿಮಿಡಿತ ತಿಳಿಯಲು ಒಂದು ಅಳತೆಗೋಲಿನಂತೆ ಕೆಲಸ ಮಾಡುತ್ತದೆ. ಈ ಅವಧಿಯ ಬಳಿಕ ಮೋದಿಯವರು ಕೂಡ ಪ್ರಧಾನ ಮಂತ್ರಿ ಸ್ಥಾನದಿಂದ ಇಳಿಯುತ್ತಾರಾ ಅಥವಾ ನಾಲ್ಕನೇ ಬಾರಿ ಎನ್ ಡಿಎ ಅಧಿಕಾರಕ್ಕೆ ಬಂದರೆ ಅವರೇ ಮುಂದುವರೆಯುತ್ತಾರಾ ಎನ್ನುವುದನ್ನು ತಿಳಿಯಲು ಕನಿಷ್ಟ ಮೂರು ಮುಕ್ಕಾಲು ವರ್ಷಗಳು ಇದ್ದೇ ಇವೆ. ಆದ್ದರಿಂದ ಈಗ ಇದು ಬಹಳ ಬೇಗದ ಯೋಜನೆ ಎಂದು ಹೇಳಬಹುದಾದರೂ ದೂರದೃಷ್ಟಿಯಿಂದ ನೋಡುವುದಾದರೆ ಬಿಜೆಪಿಯ ಭತ್ತಳಿಕೆಯ ಹೊಸ ಆಶಾಕಿರಣ ಎಂದರೆ ತಪ್ಪಾಗಲಿಕ್ಕಿಲ್ಲ.