ಡಿಜೆ ಬೇಕೆ ಬೇಕು, ಇಲ್ಲದಿದ್ದರೆ ಗಣೇಶನ ವಿಸರ್ಜನೆ ಮಾಡಲ್ಲ ಎಂದ ಗ್ರಾಮಸ್ಥರು!

ಡಿಜೆ ಬಳಕೆಗೆ ಅನುಮತಿ ನೀಡುವವರೆಗೂ ಮೋಟೆಬೆನ್ನೂರು ಎನ್ನುವ ಊರಿನ ಜನ ಹೊಸ ಹಟವೊಂದನ್ನು ಹಿಡಿದು ಕುಳಿತಿದ್ದಾರೆ. ಅವರು ತಮ್ಮ ಊರಿನ ಯಾವುದೇ ಸಾರ್ವಜನಿಕ ಗಣಪತಿಯನ್ನು ವಿಸರ್ಜಿಸಲು ನಿರ್ಧರಿಸಿದ್ದಾರೆ. ಎಂದಿನಂತೆ ಭಾನುವಾರ 5 ನೇ ದಿನಕ್ಕೆ ಗಣೇಶನ ವಿಸರ್ಜನೆ ಮಾಡಬೇಕಿತ್ತು. ಆದರೆ ಚಳಗೇರಿ ಟೋಲ್ ಬಳಿ ಡಿಜೆ ಸೌಂಡ್ ಸಿಸ್ಟಮ್ ಮೋಟೆಬೆನ್ನೂರು ಗ್ರಾಮಕ್ಕೆ ಬರದಂತೆ ಪೊಲೀಸರು ತಡೆದಿದ್ದಾರೆ. ಅಲ್ಲದೇ ಸೌಂಡ್ ಸಿಸ್ಟಮ್ ಮಾಲೀಕನನ್ನು ಮರಳಿ ಕಳುಹಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಂಪೂರ್ಣ ಡಿಜೆ ಬೇಡಾ. ಕೇವಲ ಎರಡು ಬಾಕ್ಸ್ ಗಳನ್ನು ಕೊಡಿ. ನಾವು ಅದನ್ನು ಬಳಸಿಕೊಂಡು ಗಣೇಶನ ವಿಸರ್ಜನೆಗೆ ಮುಂದಾಗುತ್ತೇವೆ ಎಂದು ಬೇಡಿಕೊಂಡರೂ ಪೊಲೀಸರು ಮಾತ್ರ ಅನುಮತಿ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸಭೆ ಸೇರಿ ಸಾಮೂಹಿಕವಾಗಿ ಗಣಪತಿ ವಿಸರ್ಜನೆ ಮಾಡದಂತೆ ನಿರ್ಣಯ ಕೈಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಗಣಪತಿ ಹಿಂದೂ ಧರ್ಮದ ಪ್ರತೀಕ. ಆದರೆ ರಾಜ್ಯ ಸರಕಾರ ಹಬ್ಬದಲ್ಲಿ ಡಿಜೆ ರದ್ದು ಮಾಡಿ ಹಿಂದೂಗಳ ಹಬ್ಬಗಳ ಮೇಲೆ ಸವಾರಿ ಮಾಡಲು ಹೊರಟಿದೆ. ಡಿಜೆ ಬಳಕೆಗೆ ಅವಕಾಶ ಕೊಡುವವರೆಗೆ ಮೋಟೆಬೆನ್ನೂರು ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾದ ಹಿಂದೂ ಮಹಾಗಣಪತಿ ಸೇರಿದಂತೆ ಗ್ರಾಮದಲ್ಲಿನ ಯಾವುದೇ ಗಣಪತಿ ವಿಸರ್ಜನೆ ಮಾಡುವುದಿಲ್ಲ ಎಂದು ಎಚ್ಚರಿಸಿದರು.
ಕೋಲಾರದಲ್ಲಿ ಗಣೇಶ ವಿಸರ್ಜನೆ ವೇಳೆ ಡಿಜೆ ನಿಷೇಧಕ್ಕೆ ಯುವಕರಿಂದ ವಿನೂತನ ಪ್ರತಿಭಟನೆ. ಮನೆ ಪಾತ್ರೆಗಳಿಂದ ತಮಟೆ ವಾದನ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಯುವಕರು:
ಗಣೇಶ ಚತುರ್ಥಿಯ ವಿಸರ್ಜನೆ ಮೆರವಣಿಗೆಯ ಸಂಪ್ರದಾಯವು ಡಿಜೆ ಸಂಗೀತದೊಂದಿಗೆ ಯುವಕರಿಗೆ ಉತ್ಸಾಹದಾಯಕವಾಗಿತ್ತು. ಆದರೆ ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಡಿಜೆ ಬಳಕೆಗೆ ನಿಷೇಧ ಹೇರಿದೆ. ಇದರಿಂದಾಗಿ ಕೋಲಾರದ ಯುವಕರು ಸಾಂಪ್ರದಾಯಿಕ ತಮಟೆ ವಾದನಕ್ಕೆ ಮೊರೆ ಹೋಗಲು ಯತ್ನಿಸಿದವರಾದರೂ, ವಾದಕರ ಕೊರತೆಯಿಂದ ತಮ್ಮದೇ ವಿನೂತನ ವಿಧಾನವನ್ನು ಕಂಡುಕೊಂಡಿದ್ದಾರೆ. ಮನೆಯಿಂದ ತಂದ ಸ್ಟೀಲ್ ನ ತಟ್ಟೆಗಳು, ತವೆಗಳು, ಚಮಚಗಳು, ನೀರಿನ ಡ್ರಮ್ ಗಳನ್ನು ಬಳಸಿ ಯುವಕರು ರೋಮಾಂಚಕ ತಮಟೆ ಶಬ್ದವನ್ನು ಸೃಷ್ಟಿಸಿದರು.
ಈ ವಿನೂತನ ಪ್ರಯತ್ನವು ಸ್ಥಳೀಯರ ಗಮನ ಸೆಳೆದಿದ್ದು, ಮೆರವಣಿಗೆಗೆ ವಿಶೇಷ ಮೆರಗು ತಂದಿದೆ. ಡಿಜೆ ಇಲ್ಲದಿದ್ದರೂ ನಾವು ಉತ್ಸಾಹ ಕಡಿಮೆ ಮಾಡಿಕೊಂಡಿಲ್ಲ. ನಮ್ಮ ಮನೆ ಸಾಮಾನುಗಳೇ ತಮಟೆಯಾದವು ಎಂದು ಮಿತ್ರ ಬಳಗದ ಸದಸ್ಯರೊಬ್ಬರು ಹೇಳಿದ್ದಾರೆ.