ಧರ್ಮಸ್ಥಳದ ವಿರುದ್ಧ ಸಂಚು ಆರೋಪ: ED ENTRY?

ಬೆಂಗಳೂರು: ಧರ್ಮಸ್ಥಳದ ವಿರುದ್ಧ ನಡೆದಿರುವ ಸಂಚು ಆರೋಪ ಪ್ರಕರಣದಲ್ಲಿ ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ED) ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ.
ಮೂಲಗಳ ಪ್ರಕಾರ, ಧರ್ಮಸ್ಥಳದ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದೂರುಗಳ ಆಧಾರದಲ್ಲಿ ಇಡಿ ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಈ ಪ್ರಕರಣದಲ್ಲಿ ‘ಒಡನಾಡಿ’ ಮತ್ತು ‘ಸಂವಾದ’ ಎಂಬ ಎರಡು ಎನ್‌ಜಿಒಗಳ ಪಾತ್ರ ಮತ್ತು ವಿದೇಶಿ ನಿಧಿಗಳ ಬಳಕೆಯ ಮೇಲೆ ತನಿಖೆ ನಡೆಯುತ್ತಿದೆ. ಕಾನೂನು ಉಲ್ಲಂಘನೆಯ ಮೂಲಕ ವಿದೇಶಿ ಹಣಕಾಸು ಬಂದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಇಡಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹಾಗೂ ಇತರ ಬ್ಯಾಂಕ್‌ಗಳಿಗೆ ಪತ್ರ ಬರೆದು, ಸಂಬಂಧಿಸಿದ ಎನ್‌ಜಿಒಗಳ ಪ್ಯಾನ್ ವಿವರಗಳು, ಖಾತೆ ಮಾಹಿತಿ ಮತ್ತು ಐದು ವರ್ಷದ ವ್ಯವಹಾರ ದಾಖಲೆಗಳನ್ನು ಒದಗಿಸುವಂತೆ ಕೇಳಿದೆ.
ಈ ನಡುವೆ ಬಿಜೆಪಿ ಸೋಮವಾರ “ಧರ್ಮಸ್ಥಳ ಚಲೋ” ರ‍್ಯಾಲಿ ನಡೆಸಿ, ದೇವಸ್ಥಾನ ವಿರುದ್ಧ ನಡೆದಿರುವ ಸಂಚು ಮತ್ತು ದೂಷಣಾ ಅಭಿಯಾನವನ್ನು ಖಂಡಿಸಿದೆ. ಇದೇ ವೇಳೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಹಸ್ತಾಂತರಿಸಲು ಆಗ್ರಹಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಪ್ರಕರಣಕ್ಕೆ ತಿರುವು ತಂದದ್ದು ಮಾಜಿ ಸ್ವಚ್ಛತಾ ಕಾರ್ಮಿಕ ಸಿ.ಎನ್. ಚಿನ್ನಯ್ಯನ ಹೇಳಿಕೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಳಿಕ ಶವಗಳನ್ನು ಧರ್ಮಸ್ಥಳದಲ್ಲಿ ಸಮಾಧಿ ಮಾಡಲಾಗಿದೆ ಎಂದು ಚಿನ್ನಯ್ಯ ಆರೋಪಿಸಿದ್ದ. ನಂತರ ಸುಳ್ಳು ಸಾಕ್ಷ್ಯ ನೀಡಿದ ಆರೋಪದಡಿ ಬಂಧನವಾಗಿತ್ತು.