ಹಿಂಸಾಪೀಡಿತವಾಗಿದ್ದ ಮಣಿಪುರಕ್ಕೆ ಸೆಪ್ಟೆಂಬರ್ 13 ರಂದು ಮೋದಿ ಭೇಟಿ ಸಾಧ್ಯತೆ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 13 ರಂದು ಮಿಜೋರಾಂ ಹಾಗೂ ಮಣಿಪುರ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ ಎಂದು ಐಜಾಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲಿಗೆ ಪ್ರಧಾನಿ ಮೋದಿ ಮಿಜೋರಾಂಗೆ ತೆರಳಿ ಹೊಸದಾಗಿ ನಿರ್ಮಿತ ಬೈರಾಬಿ–ಸೈರಾಂಗ್ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಮಿಜೋರಾಂ ಸರ್ಕಾರದ ಹಲವು ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಐಜಾಲ್‌ನಿಂದ ಪ್ರಧಾನಿ ಮಣಿಪುರಕ್ಕೆ ಪ್ರಯಾಣಿಸಲಿದ್ದಾರೆ. ಇದು 2023ರ ಮೇ ತಿಂಗಳಿನಲ್ಲಿ ಮಣಿಪುರದಲ್ಲಿ ಜಾತಿ ಹಿಂಸಾಚಾರ ಪ್ರಾರಂಭವಾದ ನಂತರ ಅವರ ಮೊದಲ ಭೇಟಿ ಆಗಲಿದೆ.
ಮಿಜೋರಾಂ ಮುಖ್ಯ ಕಾರ್ಯದರ್ಶಿ ಖಿಲ್ಲಿ ರಾಮ್ ಮೀನಾ ಸೋಮವಾರ ವಿವಿಧ ಇಲಾಖೆಗಳು ಹಾಗೂ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಧಾನಿಯವರ ಭೇಟಿಗೆ ಸಂಬಂಧಿಸಿದ ಸಿದ್ಧತೆಗಳನ್ನು ಪರಿಶೀಲಿಸಿದರು.
ಸಭೆಯಲ್ಲಿ ಭದ್ರತಾ ವ್ಯವಸ್ಥೆ, ವಾಹನ ಸಂಚಾರ ನಿರ್ವಹಣೆ, ಸ್ವಾಗತ ಹಾಗೂ ಬೀದಿ ಅಲಂಕಾರಗಳ ಬಗ್ಗೆ ಚರ್ಚಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದೇ ವೇಳೆ ಸರ್ಕಾರಿ ನೌಕರರು, ರೈತರು ಹಾಗೂ ವಿವಿಧ ಶಾಲೆ–ಕಾಲೇಜುಗಳ ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡುವ ಕುರಿತು ಸಹ ಚರ್ಚೆ ನಡೆಯಿತು. ಈ ಸಮಾರಂಭ ಐಜಾಲ್‌ನ ಲಮ್ಮೌಲ್‌ನಲ್ಲಿ ನಡೆಯಲಿದೆ.