ರಮ್ಯಾ ಕೇಸಲ್ಲಿ ಬಂಧಿಸಿದಂತೆ ಹೆಗ್ಗಡೆ ಕೇಸಲ್ಲಿ ಯಾಕಿಲ್ಲ? ಸಿಟಿ ರವಿ!

ಎಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚೆಗೆ ಚಿತ್ರ ನಟಿ, ಮಾಜಿ ಸಂಸದೆ ರಮ್ಯಾ ಅವರು ಬೆಂಗಳೂರು ಪೊಲೀಸ್ ಕಮೀಷನರ್ ಅವರಿಗೆ ತಮಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಅನೇಕ ಅಶ್ಲೀಲ ಮೇಸೆಜ್ ಬಗ್ಗೆ ದೂರು ನೀಡಿದ್ದರು. ಅವರ ದೂರನ್ನು ಸ್ವೀಕರಿಸಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇಲ್ಲಿಯ ತನಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ 12 ಜನರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇದು ಒಳ್ಳೆಯ ಬೆಳವಣಿಗೆ. ಇದರಿಂದ ವೈಯಕ್ತಿಕ ತೇಜೋವಧೆ ಮಾಡುವ ಚಾಳಿ, ಕೆಟ್ಟದಾಗಿ ದೂಷಣೆ ಮಾಡುವುದು ನಿಯಂತ್ರಣ ಬರಲಿದೆ. ಯಾಕೆಂದರೆ ತಾವು ಏನು ಮಾಡಿದರೂ ಏನೂ ಆಗುವುದಿಲ್ಲ ಎನ್ನುವ ಭ್ರಮೆಯಿಂದ ಕೆಲವು ಪುಂಡರು ಹೊರಬರಬಹುದು.
ಒಬ್ಬರು ಚಿತ್ರನಟಿ, ಮಾಜಿ ಸಂಸದೆಯವರ ಬಗ್ಗೆ ಇಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ಪೊಲೀಸರು ದೇಶ, ವಿದೇಶದ ಕೋಟ್ಯಾಂತರ ಭಕ್ತರು ನಂಬಿಕೊಂಡು ಬಂದಂತಹ ಪುಣ್ಯ ಕ್ಷೇತ್ರ ಧರ್ಮಸ್ಥಳ ಹಾಗೂ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ರಾಂತಿಯನ್ನು ಮಾಡಿ ಲಕ್ಷಾಂತರ ಹಿಂದುಳಿದವರ ಪ್ರಗತಿಗೆ ನೆರವಾಗಿರುವ ಆ ಕ್ಷೇತ್ರದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ಕೆಲವರು ಕೆಟ್ಟದಾಗಿ ದೂಷಿಸಿದರೂ ಯಾಕೆ ಬಂಧಿಸಿಲ್ಲ ಎನ್ನುವ ಪ್ರಶ್ನೆಯನ್ನು ವಿಧಾನಪರಿಷತ್ ಸದಸ್ಯ ಸಿ. ಟಿ. ರವಿ ಎತ್ತಿದ್ದಾರೆ.
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಧಾರ್ಮಿಕ ನೇತಾರರು. ಅನೇಕರ ಬದುಕಿನಲ್ಲಿ ಆರ್ಥಿಕ ಬದಲಾವಣೆಗೆ ಕಾರಣರಾದವರು. ಎಸ್ ಐಟಿ ರಚನೆಗೂ ಮೊದಲು ಆರೋಪ ಮಾಡಿದವರ ಪೂರ್ವಾಪರ ವಿಚಾರ ಮಾಡಬೇಕಿತ್ತು ಎಂದು ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿ ಟಿ ರವಿ ” ಸಿದ್ಧರಾಮಯ್ಯನವರೇ, ಯಾರೂ ಬೇಕಾದರೂ ಯಾರ ಮೇಲೆ ಆರೋಪ ಹಾಕಿದರೂ ಎಸ್ ಐಟಿ ರಚನೆ ಮಾಡುತ್ತೀರಾ? ನಿಮ್ಮ ಮೇಲೆಯೂ ಆರೋಪ ಮಾಡಿದರು. ಅದಕ್ಕೂ ವಿಶೇಷ ತನಿಖಾ ತಂಡ ರಚನೆ ಮಾಡುತ್ತೀರಾ” ಎಂದು ಪ್ರಶ್ನಿಸಿದ್ದಾರೆ.
ನಟಿ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ 12 ಜನರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಯಿತು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೇಲೆ ಆರೋಪ ಮಾಡಿದ ಎಷ್ಟು ಜನರನ್ನು ಬಂಧಿಸಿದ್ದೀರಿ? ನೀವು ಮಾಡಿದ ರಾಜಕಾರಣದ ವಿರುದ್ಧ ನಾವು ತಿರುಗಿ ಬಿದ್ದಿದ್ದೇವೆ. ಈ ಪ್ರಕರಣದಲ್ಲಿ ವಿದೇಶದಿಂದಲೂ ಹಣ ಬಂದಿದೆ. ನೀವು ಪಕ್ಷ ರಾಜಕಾರಣ ಮಾಡಬಾರದು ಎನ್ನುವ ಕಾರಣಕ್ಕೆ ನಾವು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲು ಒತ್ತಾಯಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.