39 ನೇ ವಯಸ್ಸಿನಲ್ಲಿ ವಿಶ್ವದ ನಂ 1 ಆಲ್ ರೌಂಡರ್ ಆಗಿ ಜಿಂಬಾಬ್ವೆಯ ಸಿಕಂದರ್ ರಾಝಾ!
Posted On September 3, 2025
0
ಕ್ರಿಕೆಟ್ ಆಟದಲ್ಲಿ ಇಂತಿಷ್ಟೇ ವಯಸ್ಸಿನ ನಂತರ ಆಟಗಾರ ಸಹಜವಾಗಿ ಫಾರ್ಮ್ ಉಳಿಸಿಕೊಳ್ಳಲಾಗದೇ ನಿವೃತ್ತಿ ಹೊಂದುತ್ತಾರೆ. ಆದರೆ ಕೆಲವು ಆಟಗಾರರು ಎಷ್ಟೇ ವರ್ಷದಲ್ಲಿದ್ದರೂ ಫಾರ್ಮ್ ಉಳಿಸಿಕೊಂಡಿರುತ್ತಾರೆ. ಅದರಲ್ಲಿಯೂ ಕ್ರಿಕೆಟಿನಲ್ಲಿ ನಿವೃತ್ತಿಗೆ ಹತ್ತಿರದ ವಯಸ್ಸು ಎಂದರೆ ಅದು 39 ಅಥವಾ 40. ಈ ವಯಸ್ಸಿನಲ್ಲಿ ವಿಶ್ವದ ಅತ್ಯುತ್ತಮ ಆಲ್ ರೌಂಡರ್ ಆಗುವುದು ಮತ್ತು ನಂಬರ್ 1 ಸ್ಥಾನವನ್ನು ಹೊಂದುವುದು ದೊಡ್ಡ ಸವಾಲು. ಅದನ್ನು ಮಾಡಿ ತೋರಿಸಿದ ಖ್ಯಾತಿ ಸಿಕಂದರ್ ರಾಝಾ ಅವರಿಗೆ ಸಲ್ಲುತ್ತದೆ.
ಜಿಂಬಾಬ್ವೆ ತಂಡದ ತಾರೆ ಆಟಗಾರ ಸಿಕಂದರ್ ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ಆಟಗಾರರ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆಲ್‌ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಹರಾರೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ನಂತರ ಈ ಸಾಧನೆ ಸಾಧ್ಯವಾಗಿದೆ.
39 ವರ್ಷದ ರಾಝಾ ಅವರು ಎರಡು ಪಂದ್ಯಗಳಲ್ಲಿ 92 ಹಾಗೂ ಅಜೇಯ 59 ರನ್‌ಗಳನ್ನು ಕಲೆಹಾಕಿ, ಜೊತೆಗೆ ಒಂದು ವಿಕೆಟ್ ಪಡೆದರು. ಇದರೊಂದಿಗೆ ಅವರು ಅಫ್ಘಾನಿಸ್ತಾನದ ಅಜ್ಮತುಲ್ಲಾ ಓಮರ್ಜಾಯಿ ಮತ್ತು ಮೊಹಮ್ಮದ್ ನಬಿ ಅವರನ್ನು ಹಿಂದಿಕ್ಕಿದರು. ರಾಜಾ ಅವರ ಹಿಂದಿನ ಉತ್ತಮ ಸ್ಥಾನ 2023ರ ಡಿಸೆಂಬರ್‌ನಲ್ಲಿ ಪಡೆದ ಎರಡನೇ ಸ್ಥಾನವಾಗಿತ್ತು.
ರಾಜಾ ಒಟ್ಟು 151 ರನ್ ಗಳಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಒಂಬತ್ತು ಹಂತ ಏರಿಕೆ ಕಂಡು 22ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೃತ್ತಿ ಶ್ರೇಷ್ಠ 24ನೇ ಸ್ಥಾನಕ್ಕೆ ಕೇವಲ ಎರಡು ಹಂತದ ಅಂತರ ಮಾತ್ರ. ಬೌಲಿಂಗ್ ವಿಭಾಗದಲ್ಲಿಯೂ ಒಂದು ಹಂತ ಏರಿ 38ನೇ ಸ್ಥಾನಕ್ಕೇರಿದ್ದಾರೆ.
ಶ್ರೀಲಂಕಾ ಓಪನರ್ ಪಥುಮ್ ನಿಸ್ಸಂಕಾ 198 ರನ್‌ಗಳೊಂದಿಗೆ ಸರಣಿಯ ಅತ್ಯುತ್ತಮ ಆಟಗಾರರಾದರು. ಅವರು ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಏಳು ಹಂತ ಏರಿ 13ನೇ ಸ್ಥಾನಕ್ಕೇರಿದ್ದಾರೆ. ಜನಿತ್ ಲಿಯಾನಗೆ (29ನೇ), ಜಿಂಬಾಬ್ವೆಯ ಶಾನ್ ವಿಲಿಯಮ್ಸ್ (47ನೇ) ಕೂಡ ಉತ್ತಮ ಏರಿಕೆ ಕಂಡಿದ್ದಾರೆ.
ಸ್ಕಾಟ್‌ಲ್ಯಾಂಡ್ ಆಟಗಾರ ಜಾರ್ಜ್ ಮುನ್ಸಿ (34ನೇ), ದಕ್ಷಿಣ ಆಫ್ರಿಕಾದ ಟೋನಿ ಡಿ ಝೋರ್ಜಿ (64ನೇ) ಕೂಡ ಮುನ್ನಡೆ ಸಾಧಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ ಮಹಾರಾಜ್ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4/22 ಪ್ರದರ್ಶನದ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ. ಜೋಫ್ರಾ ಆರ್ಚರ್ (19ನೇ), ಲುಂಗಿ ಎನ್‌ಗಿಡಿ (23ನೇ), ಅಸಿತ ಫೆರ್ನಾಂಡೋ (31ನೇ), ದಿಲ್ಶಾನ್ ಮದುಶಂಕಾ (52ನೇ) ಮುಂತಾದವರು ತಮ್ಮ ಸ್ಥಾನಗಳನ್ನು ಸುಧಾರಿಸಿಕೊಂಡಿದ್ದಾರೆ.
ಟಿ20 ರ‍್ಯಾಂಕಿಂಗ್‌ನಲ್ಲಿ ಅಫ್ಘಾನಿಸ್ತಾನದ ಇಬ್ರಾಹಿಂ ಜಾದ್ರಾನ್ (20ನೇ) ಹಾಗೂ ಸೆದಿಕುಲ್ಲಾ ಅಟಲ್ (127ನೇ) ಪಾಕಿಸ್ತಾನ ವಿರುದ್ಧದ ಅದ್ಭುತ ಆಟದಿಂದ ಮುನ್ನಡೆ ಸಾಧಿಸಿದ್ದಾರೆ. ಪಾಕಿಸ್ತಾನದ ಹಸನ್ ನವಾಜ್ (31ನೇ), ಸುಫಿಯಾನ್ ಮುಖೀಂ (22ನೇ), ಶಾಹೀನ್ ಅಫ್ರಿದಿ (26ನೇ), ಮೊಹಮ್ಮದ್ ನವಾಜ್ (43ನೇ) ಕೂಡ ಮುನ್ನಡೆ ಸಾಧಿಸಿದ್ದಾರೆ.
ರಾಝಾ ಅವರ ಏರಿಕೆಯ ಪರಿಣಾಮವಾಗಿ ನಬಿ ಒಡಿಐ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಸರಿದಿದ್ದರೂ, ಟಿ20ಐ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.