ಬೆಂಗಳೂರು ಕಾಲ್ತುಳಿತ : 3 ತಿಂಗಳ ಬಳಿಕ ಕೊಹ್ಲಿ ಸಂತಾಪ!

18 ವರ್ಷಗಳ ನಿರೀಕ್ಷೆಯ ನಂತರ ಜೂನ್ 3 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಆರ್ ಸಿಬಿ) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿ ಗೆದ್ದಾಗ ವಿರಾಟ್ ಕೊಹ್ಲಿ ಆಕಾಶಕ್ಕೇರಿದಂತಾಗಿದ್ದರು. ಆ ಸಂಭ್ರಮದಲ್ಲಿ ಇಡೀ ಬೆಂಗಳೂರೇ ಹರ್ಷೋದ್ಘಾರಗಳಿಂದ ತುಂಬಿತ್ತು. ಆದರೆ ಆ ಸಂಭ್ರಮ ದು:ಖಕ್ಕೆ ತಿರುಗಿತ್ತು. ಆ ವಿಜಯೋತ್ಸವದ ಅಂಗವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಸೂಕ್ತ ಸಿದ್ಧತೆಗಳ ಕೊರತೆಯಿಂದ ಪೊಲೀಸರು ಅಭಿಮಾನಿಗಳ ಜಮಾವಣೆಯನ್ನು ನಿಯಂತ್ರಿಸಲು ವಿಫಲರಾಗಿದ್ದರು. ಅಭಿಮಾನಿಗಳ ಆತುರದಿಂದ ನುಗ್ಗಾಟ ಉಂಟಾಗಿ ಜೂನ್ 4 ರಂದು ಸಂಭವಿಸಿದ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡರು ಮತ್ತು 75 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇಷ್ಟು ದೊಡ್ಡ ಘಟನೆಯಾಗಿದ್ದರೂ ಆ ಸಮಯದಲ್ಲಿ ವಿರಾಟ್ ಕೊಹ್ಲಿ ಒಂದು ಅಕ್ಷರವೂ ತುಟಿಕ್ ಪಿಟಿಕ್ ಅನ್ನಲಿಲ್ಲ ಎನ್ನುವ ಆರೋಪವೂ ಇತ್ತು. ಸೌಜನ್ಯಕ್ಕೂ ಸಂತಾಪ ಸೂಚಿಸಲಿಲ್ಲ ಎನ್ನುವ ಬೇಸರ ಅನೇಕರಲ್ಲಿತ್ತು. ವಿರಾಟ್ ಕೊಹ್ಲಿ ಆ ಗೆಲುವಿನ ಸಂಭ್ರಮದ ಬಳಿಕ ವಿದೇಶಕ್ಕೆ ಹಾರಿದ್ದರು. ಈಗ ಮೂರು ತಿಂಗಳ ಬಳಿಕ ಅವರು ದುರಂತದ ಬಗ್ಗೆ ತಮ್ಮ ಬೇಸರವನ್ನು ತೋರ್ಪಡಿಸಿದ್ದಾರೆ. ಅದರ ಕನ್ನಡ ಭಾವಾರ್ಥವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. “ಜೂನ್ 4 ರ ಹೃದಯ ವಿದ್ರಾವಕ ಘಟನೆಗೆ ಜೀವನದಲ್ಲಿ ಯಾರೂ ಸಿದ್ಧರಾಗಿರುವುದಿಲ್ಲ. ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲೇ ದೊಡ್ಡ ಸಂತೋಷದ ಕ್ಷಣವಾಗಬೇಕಾದದ್ದು ದುರಂತವಾಗಿ ಮಾರ್ಪಟ್ಟಿತ್ತು. ನಾವು ಕಳೆದುಕೊಂಡ ಕುಟುಂಬಗಳ ಬಗ್ಗೆ ನಾನು ನಿರಂತರವಾಗಿ ಚಿಂತಿಸುತ್ತಿದ್ದೇನೆ, ಪ್ರಾರ್ಥಿಸುತ್ತಿದ್ದೇನೆ. ಗಾಯಗೊಂಡ ಅಭಿಮಾನಿಗಳಿಗೂ ನನ್ನ ಹೃದಯಪೂರ್ವಕ ಪ್ರಾರ್ಥನೆ. ನಿಮ್ಮ ನಷ್ಟ ಈಗ ನಮ್ಮ ಕಥೆಯ ಭಾಗವಾಗಿದೆ. ನಾವು ಒಟ್ಟಿಗೆ ಕಾಳಜಿ, ಗೌರವ ಮತ್ತು ಹೊಣೆಗಾರಿಕೆಯಿಂದ ಮುಂದೆ ಸಾಗುತ್ತೇವೆ” ಎಂದು ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಇದಕ್ಕೆ ಸಮನ್ವಯವಾಗಿ ಆರ್ ಸಿಬಿ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಆರ್ ಸಿಬಿ ಕ್ಯಾರ್ಸ್ ಎಂಬ ಅಭಿಯಾನವನ್ನು ಪ್ರಾರಂಭಿಸಿರುವ ಫ್ರಾಂಚೈಸಿ ” ಇದು ಧೀರ್ಘಾವಧಿಯ ಬದ್ಧತೆ. ಅವರ ಸ್ಮರಣೆಯನ್ನು ಗೌರವಿಸುವುದರೊಂದಿಗೆ ಅರ್ಥಪೂರ್ಣ ಕಾರ್ಯವನ್ನು ಮುಂದುವರೆಸುತ್ತೇವೆ. ನಮ್ಮ ಪ್ರತಿಯೊಂದು ಹೆಜ್ಜೆಯೂ ಅಭಿಮಾನಿಗಳ ಭಾವನೆ, ನಿರೀಕ್ಷೆ ಮತ್ತು ಅರ್ಹತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದೆ. ಒಟ್ಟಿನಲ್ಲಿ ಈಗಲಾದರೂ ವಿರಾಟ್ ಕೊಹ್ಲಿ ಸಂತಾಪ ವ್ಯಕ್ತಪಡಿಸಿದ್ದಾರಲ್ಲ ಎನ್ನುವುದೇ ಸಮಾಧಾನಕರ ಸಂಗತಿ.