ಕ್ಯಾಬಿನೆಟಿನಲ್ಲಿ ಚರ್ಚಿಸಿ ಧರ್ಮಸ್ಥಳ ಕೇಸ್ ನಿರ್ಧಾರ: ಸಂತ ನಿಯೋಗಕ್ಕೆ ಅಮಿತ್ ಶಾ ಭರವಸೆ!

ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಎಲ್ಲಾ ಕಡೆ ಸಾಕಷ್ಟು ಚರ್ಚೆಯಾಗುತ್ತಿದ್ದಂತೆ ಈಗ ವಿವಿಧ ಮಠಾಧೀಶರು ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರನ್ನು ಒಳಗೊಂಡು ಎಂಟು ಸ್ವಾಮೀಜಿಗಳ ಸಂತ ನಿಯೋಗವು ದೆಹಲಿಗೆ ತೆರಳಿದೆ. ಅಲ್ಲಿ ಅವರು ರಾಷ್ಟ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಹಿಂದೂಗಳು, ಹಿಂದೂ ಧಾರ್ಮಿಕ ಕೇಂದ್ರಗಳು ಹಾಗೂ ಹಿಂದೂ ಮಠಾಧೀಶರ ಮೇಲೆ ಪದೇ ಪದೇ ದಾಳಿ ಆಗುತ್ತಿದೆ. ಆರಾರು ತಿಂಗಳ ಅಂತರದಲ್ಲಿ ಷಡ್ಯಂತ್ರ ರಚಿಸಿ ಅವಹೇಳನ ಕೃತ್ಯಗಳನ್ನು ನಡೆಸಲಾಗುತ್ತಿದೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ. ಹೀಗಾಗಿ ಸೂಕ್ತ ತನಿಖೆ ಆಗಬೇಕು ಎಂದು ಸ್ವಾಮೀಜಿಗಳು ಆಗ್ರಹಿಸಿದ್ದಾರೆ.
ಸ್ವಾಮೀಜಿಗಳ ಮನವಿಯನ್ನು ಓದಿ, ಕೇಳಿ ಸಂತರ ನಿಯೋಗಕ್ಕೆ ಭರವಸೆ ನೀಡಿರುವ ಅಮಿತ್ ಶಾ ” ಧರ್ಮಸ್ಥಳದ ಪ್ರಕರಣದ ಎಲ್ಲಾ ಬೆಳವಣಿಗೆಗಳನ್ನು ನಾನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸುತ್ತೇವೆ. ಅದರ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಈ ಮೂಲಕ ಇಂದಲ್ಲ ನಾಳೆ ಕೇಂದ್ರ ಸರಕಾರ ಧರ್ಮಸ್ಥಳ ಪ್ರಕರಣದಲ್ಲಿ ಏನಾದರೂ ಕ್ರಮ ಕೈಗೊಳ್ಳುವ ಸುಳಿವು ನೀಡಿದೆ. ಈಗಾಗಲೇ ಇಡಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಅಗತ್ಯವಾಗಿ ಬೇಕಾಗಿರುವ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ. ಇತ್ತ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಈ ಪ್ರಕರಣ ನೀಡಲು ಭಾಜಪಾ ಮುಖಂಡರು ಒತ್ತಾಯಿಸುತ್ತಿದ್ದಾರೆ. ಇನ್ನೊಂದು ಕಡೆಯಿಂದ ಸಂತರು ಹೋಗಿ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವ ಮೂಲಕ ಇದು ಇನ್ನೊಂದು ಹಂತವನ್ನು ತಲುಪಿದಂತಾಗಿದೆ.