ಜಿಎಸ್ ಟಿ ಮಾಸ್ಟರ್ ಸ್ಟೋಕ್: ಬಿಹಾರ ಚುನಾವಣೆಯಲ್ಲಿ ಎನ್ ಡಿಎಗೆ ಲಾಭ ಆಗಲಿದೆಯಾ?

ತಂಬಾಕು ಉತ್ಪನ್ನಗಳು, ಸಿಗರೇಟು, ಪಾನ್ ಮಸಾಲಾಗಳೇ ಪ್ರತಿ ಬಾರಿ ಹೆಚ್ಚುವರಿ ತೆರಿಗೆಗಳನ್ನು ಹಾಕಿಸಿಕೊಂಡು ತಂಬಾಕು ಪ್ರಿಯರ ನಿದ್ದೆಗೆಡಿಸುತ್ತವೆ. ಅದು ಈ ಬಾರಿ ಮತ್ತೇ ಸಾಬೀತಾಗಿದೆ. ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿಯೂ ಇದೇ ಉತ್ಪನ್ನಗಳಿಗೆ 40% ತೆರಿಗೆ ಹಾಕುವ ಮೂಲಕ ಇವುಗಳ ಬೆಲೆ ಇನ್ನಷ್ಟು ಹೆಚ್ಚಳವಾಗಿದೆ. ಇದರೊಂದಿಗೆ 1200 ಸಿಸಿಗಿಂತ ಹೆಚ್ಚು ಸಾಮರ್ತ್ಯದ ಹಾಗೂ 4000 ಮಿ.ಮೀ ಉದ್ದಕ್ಕಿಂತ ಹೆಚ್ಚಾದ ಕಾರುಗಳಿಗೂ 40 ಶೇಕಡಾ ಜಿಎಸ್ ಟಿ ಅನ್ವಯವಾಗಲಿದೆ. ಇನ್ನೊಂದು ಉತ್ಪನ್ನವನ್ನು ಕೂಡ ಈ 40% ಸ್ಲ್ಯಾಬ್ ಅಡಿಯಲ್ಲಿ ತರಲಾಗಿದೆ. ಅದು ಸಕ್ಕರೆ ಸೇರಿಸಿದ ಗ್ಯಾಸ್ ಪಾನೀಯಗಳು, ಇನ್ನು ನಾನ್ ಆಲ್ಕೋಹಾಲಿಕ್ ಪಾನೀಯಗಳ ಮೇಲಿನ ತೆರಿಗೆಯನ್ನು 28 ಶೇಕಡಾದಿಂದ 40% ಕ್ಕೆ ಹೆಚ್ಚಿಸಲಾಗಿದೆ. ಇದು ನಿಜಕ್ಕೂ ಬಹಳ ಉತ್ತಮವಾದ ಕಾರ್ಯ.
ಯಾರಿಗೆ ಆರೋಗ್ಯಕ್ಕಿಂತ ತಂಬಾಕು ಸೇವನೆ ಮತ್ತು ಸಕ್ಕರೆ ಮಿಶ್ರಿತ ಗ್ಯಾಸ್ ಪಾನೀಯಗಳು ಇಷ್ಟವೋ ಅವರಿಗೆ ಅದನ್ನು ಹೆಚ್ಚು ಬೆಲೆ ಕೊಟ್ಟು ಸೇವಿಸಲು ಸೂಚಿಸಿದಂತಾಗಿದೆ. ಇನ್ನು ಜನಸಾಮಾನ್ಯರಿಗೆ ದಿನಬಳಕೆಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳಾದ ಸೋಪು, ಪೇಸ್ಟು ಸೇರಿ ಮಧ್ಯಮ ವರ್ಗದವರು ಖರೀದಿಸಲು ಬಯಸುವ ಸಣ್ಣ ಕಾರುಗಳಿಗೆ ತೆರಿಗೆ ಕಡಿತಗೊಂಡಿದೆ. ಬ್ರೆಡ್, ಪನ್ನೀರ್ ಮೇಲೆ ಶೂನ್ಯ ತೆರಿಗೆ ಹಾಕಿದ್ದು ಉತ್ತಮ ನಿರ್ದಾರ ಎನ್ನಬಹುದು. ಇದೆಲ್ಲವೂ ಮುಂದಿನ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ.
ಇದರಿಂದ ರಾಜ್ಯಗಳಿಗೆ ಬರುವ ಆದಾಯಕ್ಕೆ ಕೊರತೆಯಾಗಲಿದೆ ಎಂದು ಕೆಲವು ರಾಜ್ಯಗಳು ಅಪಸ್ವರ ಎತ್ತಿವೆ. ಆದರೆ ಅಂತಹ ರಾಜ್ಯಗಳು ಇದನ್ನು ವಿರೋಧ ಮಾಡಿದಷ್ಟು ಜನರ ಕೆಂಗೆಣ್ಣಿಗೆ ಗುರಿಯಾಗುತ್ತವೆ ಎನ್ನುವುದು ಕೂಡ ನಿಜ. ಆದ್ದರಿಂದ ಆದಷ್ಟು ಬಹುತೇಕ ರಾಜ್ಯಗಳು ಇದರ ಪರವಾಗಿ ಇವೆ. ಈ ಜಿಎಸ್ ಟಿ ದರ ಇಳಿಕೆಯ ಪ್ರಯೋಜನ ಕೇಂದ್ರದ ಎನ್ ಡಿಎ ಸರಕಾರಕ್ಕೆ ಹತ್ತಿರದಲ್ಲಿಯೇ ಇರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸಿಗುತ್ತಾ? ಬಹುತೇಕ ಹೌದು. ಯಾಕೆಂದರೆ ಈ ವಿಷಯ ಜಿಎಸ್ ಟಿ ಕೌನ್ಸಿಲ್ ಎನ್ನುವ ದೇಶದ ಎಲ್ಲಾ ರಾಜ್ಯಗಳ ವಿತ್ತ ಸಚಿವರು ಒಳಗೊಂಡ ಸಭೆಯಲ್ಲಿ ನಿರ್ಧಾರವಾಗಿದ್ದರೂ ಎನ್ ಡಿಎ ಸರಕಾರ ಕೇಂದ್ರದಲ್ಲಿ ಇರುವುದರಿಂದ ಬೆಲೆ ಇಳಿಸಿದ್ದು ಮೋದಿ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ರೋಟಿ, ಪರೋಟಕ್ಕೆ ಟ್ಯಾಕ್ಸೆ ಇಲ್ವಂತೆ ಎನ್ನುವ ವಾಕ್ಯ ಬಿಹಾರದಂತಹ ರಾಜ್ಯದಲ್ಲಿ ಕೇಸರಿ ಬ್ರಿಗೇಡಿನ ಪರವಾದ ಅಲೆಯನ್ನೇ ಎಬ್ಬಿಸಬಹುದು. ಆದ್ದರಿಂದ ಸರಿಯಾದ ಸಮಯದಲ್ಲಿ ಮೋದಿ ಮಾಸ್ಟರ್ ಸ್ಟೋಕ್ ಬಾರಿಸಿದ್ದಾರೆ. ಇನ್ನು ಸೋಪು, ಪೇಸ್ಟು ಸಹಿತ ದಿನಬಳಕೆಯ ವಸ್ತುಗಳು ಅಗ್ಗವಾಗುವುದರಿಂದ ಜನ ಮುಂದಿನ ಬಾರಿ ಅದನ್ನು ಖರೀದಿಸಲು ಹೋಗುವಾಗ ಬೆಲೆ ಇಳಿದದ್ದು ನೋಡಿ ಖುಷಿಪಡುತ್ತಾರೆ. ಇದರಿಂದ ಹೆಚ್ಚು ಸಮಾಧಾನಗೊಳ್ಳುವುದು ಮಹಿಳೆಯರು. ಅವರ ತಿಂಗಳ ಖರ್ಚಿನಲ್ಲಿ ಒಂದಿಷ್ಟು ಉಳಿತಾಯವನ್ನು ಅವರು ಕಂಡುಕೊಳ್ಳಲಿದ್ದಾರೆ.
ಇನ್ನು ಮಧ್ಯಮ ವರ್ಗದವರಿಗೂ ಅದರ ಲಾಭ ಸಿಗಲಿದೆ. ಈ ವಿಷಯವನ್ನು ಹಿಡಿದುಕೊಂಡು ರಾಮ ವಿಲಾಸ್ ಪಾಸ್ವಾನ್ ಅವರ ಲೋಕ್ ಜನಶಕ್ತಿ ಪಾರ್ಟಿ ಹಾಗೂ ನಿತೀಶ್ ಅವರ ಜನತಾ ದಳ (ಯುನೈಟೆಡ್) ಒಂದಿಷ್ಟು ಮೈಲೇಜ್ ಪಡೆದುಕೊಳ್ಳಬಹುದು. ಈ ಜಿಎಸ್ ಟಿ ವಿಷಯದಲ್ಲಿ ಕಾಂಗ್ರೆಸ್ ಏನು ವಿರೋಧ ಮಾತನಾಡಿದರೂ ಜನರಿಗೆ ಆಗಲಿರುವ ಲಾಭದ ಎದುರು ಅದು ಏನು ಅಲ್ಲ ಎನ್ನುವುದು ವಿಪಕ್ಷಗಳಿಗೂ ಗೊತ್ತಿದೆ.