ಡಿಕೆ ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವ! ಎಡಿಆರ್ ವರದಿ

ಕರ್ನಾಟಕ ಒಂದಲ್ಲ ಒಂದು ಕಾರಣಕ್ಕೆ ಆಗಾಗ ದೇಶದಲ್ಲಿ ವಿಶಿಷ್ಟ ರೀತಿಯಲ್ಲಿ ಸುದ್ದಿ ಮಾಡುವುದು ನಿಮಗೆ ಗೊತ್ತಿದೆ. ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದಾ ಅಥವಾ ಇರಿಸುಮುರಿಸಾಗಿ ಸ್ವೀಕರಿಸುವುದಾ ಎನ್ನುವುದೇ ಈಗ ಇರುವ ವಿಷಯ. ಈಗ ಅಂತಹುದೇ ಮತ್ತೊಂದು ಕಾರಣಕ್ಕೆ ಕರ್ನಾಟಕ ಸುದ್ದಿಯಾಗಿದೆ. ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ (ಎಡಿಆರ್) ವರದಿಯ ಪ್ರಕಾರ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶ್ರೀಮಂತ ಸಚಿವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿದ ಪ್ರಮಾಣಪತ್ರಗಳ ಆಧಾರದ ಮೇಲೆ ಈ ಪಟ್ಟಿಯನ್ನು ಮಾಡಲಾಗಿದೆ. ಅಲ್ಲದೇ, ಕರ್ನಾಟಕವು ನೂರು ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿರುವ ಎಂಟು ಸಚಿವರನ್ನು ಹೊಂದಿದೆ ಎಂದು ವರದಿ ತಿಳಿಸಿದೆ.
ದೇಶದ 27 ವಿಧಾನಸಭೆಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ 652 ಸಚಿವರ ಪೈಕಿ 643 ಸಚಿವರು ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರಗಳನ್ನು ವಿಶ್ಲೇಷಿಸಲಾಗಿದೆ. ಅಷ್ಟೇ ಅಲ್ಲದೆ ಕರ್ನಾಟಕವು ನೂರು ಕೋಟಿಗಿಂತ ಹೆಚ್ಚು ಆಸ್ತಿ ಇರುವ ಎಂಟು ಸಚಿವರನ್ನು ಹೊಂದಿದೆ. ಆಂಧ್ರ ಪ್ರದೇಶವು ನಂತರದ ಸ್ಥಾನದಲ್ಲಿದೆ.
ಆಂಧ್ರ ಪ್ರದೇಶದಲ್ಲಿ ಆರು ಮತ್ತು ಮಹಾರಾಷ್ಟ್ರದಲ್ಲಿ ನಾಲ್ಕು ಮಂದಿ ಕೋಟಿಗಿಂತ ಹೆಚ್ಚು ಆಸ್ತಿ ಇರುವ ಸಚಿವರು ಇದ್ದಾರೆ. ಅರುಣಾಚಲ ಪ್ರದೇಶ, ದೆಹಲಿ, ಹರಿಯಾಣ ಮತ್ತು ತೆಲಂಗಾಣದಲ್ಲಿ ತಲಾ ಇಬ್ಬರು, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಪಂಜಾಬ್‌ನಲ್ಲಿ ತಲಾ ಒಬ್ಬ ಕೋಟ್ಯಾಧಿಪತಿ ಮಂತ್ರಿಯಿದ್ದಾರೆ. ಕೇಂದ್ರ ಸರ್ಕಾರದಲ್ಲಿ, 72 ಕೇಂದ್ರ ಮಂತ್ರಿಗಳಲ್ಲಿ ಆರು (8%) ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ವರದಿ ಹೇಳಿದೆ.
ದೇಶದ ಅತ್ಯಂತ ಶ್ರೀಮಂತ ಮಂತ್ರಿ ಎಂದರೆ ಟಿಡಿಪಿ ಪಕ್ಷದ ಡಾ. ಚಂದ್ರಶೇಖರ್ ಪೆಮ್ಮಸಾನಿ. ಅವರು ಆಂಧ್ರ ಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದ ಸದಸ್ಯರು. ಅವರು 5,705 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಚಂದ್ರಶೇಖರ ಪೆಮ್ಮಸಾನಿ (ಕೇಂದ್ರ ಸಚಿವ-ಟಿಡಿಪಿ) – 5,705 ಕೋಟಿ ರೂ
ಡಿಕೆ ಶಿವಕುಮಾರ್ (ಕಾಂಗ್ರೆಸ್)- 1,413 ಕೋಟಿ. ರೂ
ಚಂದ್ರಬಾಬು ನಾಯ್ಡು (ಟಿಡಿಪಿ)- 971 ಕೋಟಿ.ರೂ
ನಾರಾಯಣ ಪೊಂಗೂರು (ಟಿಡಿಪಿ)- 824 ಕೋಟಿ ರೂ
ಸುರೇಶ್ ಬಿ.ಎಸ್( ಕಾಂಗ್ರೆಸ್)- 648 ಕೋಟಿ ರೂ
ಪಕ್ಷಗಳ ಪ್ರಕಾರ ನೋಡಿದರೆ, ಬಿಜೆಪಿಯಲ್ಲಿ ಅತಿ ಹೆಚ್ಚು ಕೋಟ್ಯಾಧಿಪತಿ ಮಂತ್ರಿಗಳು ಇದ್ದಾರೆ. ಅವರಲ್ಲಿ 14 ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಆದರೆ ಇದು ಅವರ ಒಟ್ಟು ಮಂತ್ರಿಗಳಲ್ಲಿ ಕೇವಲ 4% ಮಾತ್ರ. ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಅವರ 61 ಮಂತ್ರಿಗಳಲ್ಲಿ 11 (18%) ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಟಿಡಿಪಿ ಪಕ್ಷದ 23 ಮಂತ್ರಿಗಳಲ್ಲಿ 6 ಮಂದಿ (26%) ಕೋಟ್ಯಾಧಿಪತಿಗಳಾಗಿದ್ದಾರೆ. ಆಮ್ ಆದ್ಮಿ ಪಾರ್ಟಿ, ಜನಸೇನಾ ಪಾರ್ಟಿ, ಜೆಡಿ(ಎಸ್), ಎನ್‌ಸಿಪಿ ಮತ್ತು ಶಿವಸೇನಾ ಪಕ್ಷಗಳಲ್ಲೂ ಕೋಟ್ಯಾಧಿಪತಿ ಮಂತ್ರಿಗಳಿದ್ದಾರೆ.