ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ದಿ ಬೆಂಗಾಲ್ ಫೈಲ್ಸ್” ಸಿನೆಮಾಕ್ಕೆ ಪಶ್ಚಿಮ ಬಂಗಾಲದಲ್ಲಿ ಅಘೋಷಿತ ತಡೆ!

ಹಿಂದೂಗಳ ಮಾರಣ ಹೋಮದ ಮೇಲೆ ಹೆಣೆದಿರುವ 1946 ರ ನೈಜ ಕಥೆಯನ್ನು ಒಳಗೊಂಡಿರುವ ದಿ ಬಂಗಾಲ್ ಫೈಲ್ಸ್ ಸಿನೆಮಾಕ್ಕೆ ಪಶ್ಚಿಮ ಬಂಗಾಳದಲ್ಲಿ ಅಘೋಷಿತ ತಡೆಯೊಡ್ಡಿರುವ ಬಗ್ಗೆ ಸಿನೆಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ. ಸಿನೆಮಾ ಬಿಡುಗಡೆಗೆ ಅಲ್ಲಿ ರಾಜಕೀಯ ವಿರೋಧಗಳು ಇರುವುದರಿಂದ ಈ ಸಿನೆಮಾ ಜನರ ಮುಂದೆ ತರಲು ಮಮತಾ ಬ್ಯಾನರ್ಜಿ ಬಿಡುತ್ತಿಲ್ಲ ಎಂದು ಅಗ್ನಿಹೋತ್ರಿ ಹೇಳಿದ್ದಾರೆ. 1946 ರ ಅಗಸ್ಟ್ ನಲ್ಲಿ ಬಂಗಾಲದ ಮುಸ್ಲಿಂ ಲೀಗ್ ನೇರ ದಾಳಿಗೆ ಕರೆಕೊಟ್ಟಿದ್ದ ಕಾರಣ ಆ ಭಾಗದಲ್ಲಿ ಕೋಮು ಹಿಂಸೆಗಳು ದೊಡ್ಡ ಪ್ರಮಾಣದಲ್ಲಿ ನಡೆದು ಅಪಾರ ಸಾವು, ನೋವುಗಳು ವರದಿಯಾಗಿದ್ದವು. ಎಲ್ಲಿಯ ತನಕ ಅಂದರೆ ಸ್ವತ: ಮಹಾತ್ಮಾ ಗಾಂಧಿಜಿಯವರೇ ಈ ಕೋಮು ಸಂಘರ್ಷ ನಿಲ್ಲುವ ತನಕ ಅಮರಣಾಂತ ಉಪವಾಸ ಮಾಡುತ್ತೇನೆ ಎಂದು ಘೋಷಿಸಿದ್ದರು.
ಈ ವಿಷಯದಲ್ಲಿ “ಎಕ್ಸ್”ನಲ್ಲಿ ಬರೆದಿರುವ ಅಗ್ನಿಹೋತ್ರಿ ” ಅಂದು ರವೀಂದ್ರನಾಥ ಠಾಗೋರರು ಭಯವಿಲ್ಲದ ಬಂಗಾಲದ ಕನಸು ಕಂಡಿದ್ದರು. ಆದರೆ ಇವತ್ತಿನ ಪಶ್ಚಿಮ ಬಂಗಾಲ ಸರಕಾರ ಸಿನೆಮಾವನ್ನೇ ಬ್ಯಾನ್ ಮಾಡುವ ಮೂಲಕ ಹಿಂದೂಗಳ ಮೇಲಿನ ನರಮೇಧದ ಹಸಿಹಸಿ ಸತ್ಯವನ್ನು ಪ್ರಪಂಚಕ್ಕೆ ತಿಳಿಸುವುದಕ್ಕೆ ಅಡ್ಡಗಾಲು ಹಾಕಿದೆ. ಅಂದು ಪಶ್ಚಿಮ ಬಂಗಾಲದಲ್ಲಿ ಆದ ಅಮಾನುಷ ಕೃತ್ಯವನ್ನು ವಿರೋಧಿಸುವುದಕ್ಕಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನೆಮಾವನ್ನು ವೀಕ್ಷಿಸಬೇಕು” ಎಂದು ಅವರು ಕರೆ ನೀಡಿದ್ದಾರೆ. ಸಿನೆಮಾದ ನಿರ್ಮಾಪಕಿ-ನಟಿ ಪಲ್ಲವಿ ಜೋಷಿ ಬಹಿರಂಗ ಪತ್ರವೊಂದನ್ನು ದೇಶದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಬರೆದಿದ್ದು ಅದರಲ್ಲಿ ಸಿನೆಮಾ ಮಂದಿರದ ಮಾಲೀಕರು, ಪ್ರದರ್ಶಕರು ಪಶ್ಚಿಮ ಬಂಗಾಲದಲ್ಲಿ ಸಿನೆಮಾ ಪ್ರದರ್ಶನದ ವಿರುದ್ಧ ತಮ್ಮ ಮೇಲಿರುವ ಒತ್ತಡವನ್ನು ಹೇಳಿಕೊಂಡಿದ್ದು, ಆತಂಕದ ಕಾರಣದಿಂದ ಸಿನೆಮಾ ಪ್ರದರ್ಶಿಸುವಲ್ಲಿ ವಿಫಲರಾಗಿರುವುದರ ಬಗ್ಗೆ ತಿಳಿಸಿದ್ದಾರೆ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ. ದಿ ಬೆಂಗಾಲ್ ಫೈಲ್ಸ್ ಇಲ್ಲಿಯ ತನಕ ಹಿಂದೂಗಳ ಮೇಲೆ ನಡೆದ ದಬ್ಬಾಳಿಕೆ, ಭಯೋತ್ಪಾದಕ ವಾತಾವರಣ ಮತ್ತು ವಿಭಜನೆಯ ಸಮಯದಲ್ಲಿ ನಡೆದ ದೌರ್ಜನ್ಯದ ಕಥೆಯನ್ನು ವಿವರಿಸುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಹಿರಿಯ ವಿತರಕರೊಬ್ಬರು ಮಾತನಾಡಿ ” ದಿ ಬಂಗಾಲ್ ಫೈಲ್ಸ್ ಸಿನೆಮಾ ಥಿಯೇಟರ್ ಗಳಲ್ಲಿ ಯಾಕೆ ಪ್ರದರ್ಶನಗೊಳ್ಳುತ್ತಿಲ್ಲ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಯಾವುದೇ ಸಿನೆಮಾ ಪ್ರದರ್ಶಿಸುವುದು ಬಿಡುವುದು ಸಿನೆಮಾ ಮಂದಿರದ ಮಾಲೀಕರ ಹಾಗೂ ಮಲ್ಟಿಫ್ಲೆಕ್ಸ್ ಒನರ್ ಗಳ ಸ್ವ ಇಚ್ಚೆಯಾಗಿದೆ” ಎಂದು ಹೇಳಿದ್ದಾರೆ. ಈ ಸಿನೆಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಅಗಸ್ಟ್ 17 ರಂದು ಕೊಲ್ಕೊತ್ತಾದ ಹೋಟೇಲೊಂದರಲ್ಲಿ ಲಾಂಚ್ ಆಗುವುದು ಕೊನೆಯ ಹಂತದಲ್ಲಿ ತಡೆಹಿಡಿಯಲಾಗಿತ್ತು. ಈ ಬಗ್ಗೆ ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಮಾತನಾಡಿ ” ಸಿನೆಮಾ ನಿರ್ದೇಶಕ ಅಗ್ನಿಹೋತ್ರಿ ಬಿಜೆಪಿಯ ಪ್ರೊಪೊಗಾಂಡಾವನ್ನು ಬಳಸಿ ಸಮಾಜದಲ್ಲಿ ಕಂದಕವನ್ನು ಉಂಟುಮಾಡುವುದನ್ನು ಟಿಎಂಸಿ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ. ಈ ಸಿನೆಮಾದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಷಿ, ಸಾಸ್ವತ ಚಟರ್ಜಿ, ದರ್ಶನ್ ಕುಮಾರ್ ಹಾಗೂ ಸೌರವ್ ದಾಸ್ ಮುಖ್ಯ ಭೂಮಿಕೆಯಲ್ಲಿದ್ದಾರೆ.