ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ – ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!

ದೇಶದ ಗಮನ ಸೆಳೆದಿರುವ ಸೌಜನ್ಯ ಪ್ರಕರಣದಲ್ಲಿ ಆಕೆಯ ಮೇಲೆ ದೌರ್ಜನ್ಯ ಮಾಡಿ ಕೊಲೆ ಮಾಡಿರುವುದು ಆಕೆಯ ಮಾವ ವಿಠಲ ಗೌಡ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅದಕ್ಕಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇನೆ. ಅದನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರಿಗೆ ನೀಡಲು ಬಂದಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮಾಧ್ಯಮಗಳಿಗೆ ಹೇಳಿದ್ದಾರೆ.
ಕೃಷ್ಣ ” ಇಲ್ಲಿ ಆರೋಪಿಗೆ ದುಷ್ಕತ್ಯ ಮಾಡಲು ಏನಾದರೂ ಉದ್ದೇಶ ಇದೆಯಾ ಎಂದು ನೋಡಬೇಕಾಗುತ್ತದೆ. ಇಲ್ಲಿ ವಿಠಲ ಗೌಡ ಆಕೆ ಸೌಜನ್ಯಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಆಕೆಯ ಮೈಮುಟ್ಟುವುದು ಮಾಡುತ್ತಿದ್ದ. ಆಕೆಯನ್ನು ಅನುಭವಿಸಬೇಕು ಎನ್ನುವ ಮನೋಭಾವ ಇತ್ತು. ಆ ಕಾರಣಕ್ಕೆ ಅವಳೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಲು ಹೋಗಿದ್ದಾನೆ. ಆಗ ಆಕೆ ಕಿರುಚಿದಾಗ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಅದರ ನಂತರ ಆಕೆ ಮನೆಗೆ ಬಂದಿಲ್ಲ. ಕಾಲೇಜಿನಿಂದ ಮನೆಗೆ ಬರುವ ದಾರಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಸುಳ್ಳನ್ನು ಬಿಂಬಿಸಿರುವುದು ಕಂಡುಬರುತ್ತದೆ” ಎಂದು ಕೃಷ್ಣ ಮಾಧ್ಯಮಗಳಿಗೆ ಹೇಳಿದ್ದಾರೆ.
ಅವರು ಇನ್ನೂ ಮುಂದುವರೆದು “ಈ ನನ್ನ ದೂರು ಅರ್ಜಿಯನ್ನು ಪೊಲೀಸ್ ಅಧಿಕಾರಿಗಳು ತನಿಖೆ ಮಾಡಿ ವಿಠಲ ಗೌಡ ಹಾಗೂ ಅವನಿಗೆ ಸಹಕರಿಸಿದವರಿಗೆ ಶಿಕ್ಷೆ ನೀಡಿದರೆ ಸೌಜನ್ಯ ಆತ್ಮಕ್ಕೆ ಶಾಂತಿ ಸಿಗುತ್ತದೆ” ಎಂದು ಅವರು ಹೇಳಿದ್ದಾರೆ.
ಕೃಷ್ಣ ” ಒಂದು ವೇಳೆ ಬೇರೆಯವರು ಅಲ್ಲಿ ಅಪಹರಣ, ಅತ್ಯಾಚಾರ ಮಾಡಿದರೆ ಅವಳ ಬ್ಯಾಗು ಅಲ್ಲಿ ಸಿಗುತ್ತಿರಲಿಲ್ಲ. ಆದರೆ ಬ್ಯಾಗು ಸಿಕ್ಕಿದೆ. ಇನ್ನು ಅವಳು ಅಂದು ಮಧ್ಯಾಹ್ನ ಊಟ ಮಾಡಲಿಲ್ಲ ಎಂದು ಹೇಳಲಾಗಿತ್ತು. ಆದರೆ ಪೋಸ್ಟ್ ಮಾರ್ಟಂ ಮಾಡಿದಾಗ ಅವಳ ಹೊಟ್ಟೆಯಲ್ಲಿ ಜೀರ್ಣವಾದ ಆಹಾರ ಇತ್ತು. ಅವಳು ವಿಠಲ ಗೌಡನ ಮನೆಗೆ ಹೋಗಿದ್ದಾಳೆ. ಅಲ್ಲಿ ಊಟ ಮಾಡಿದ್ದಾಳೆ. ಅಲ್ಲಿ ಅವಳ ಮೇಲೆ ಅತ್ಯಾಚಾರದ ಪ್ರಯತ್ನ ಆಗಿದೆ. ಅವಳು ಕಿರುಚಿದ್ದಾಳೆ. ಅಲ್ಲಿ ಕೊಲೆ ಮಾಡಲಾಗಿದೆ. ಅದರೊಂದಿಗೆ ಅವಳ ಬಟ್ಟೆಗಳನ್ನು ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಿ ಅದರ ಮೇಲಿನ ಅಚ್ಚನ್ನು ಪತ್ತೆ ಹಚ್ಚಬೇಕಾಗಿತ್ತು. ಅದನ್ನು ಪೊಲೀಸರು ಮಾಡಿಲ್ಲ. ಇನ್ನು ಸಂತೋಷ್ ರಾವ್ ನನ್ನು ಈ ಕುಟುಂಬದವರು ಉಳಿಸುವ ಕೆಲಸ ಮಾಡಿದ್ದಾರೆ. ಯಾಕೆಂದರೆ ಕೊಲೆ ಮಾಡಿ ತಂದು ಹಾಕಿರುವ ಏನನ್ನೋ ಅವನು ನೋಡಿದ್ದಾನೆ. ಸಂತೋಷ್ ರಾವ್ ನನ್ನು ಇವರು ಖರ್ಚು ಮಾಡಿ ಉಳಿಸುವ ಕೆಲಸ ಮಾಡಿದ್ದಾರೆ. ಇವರು ಕೋರ್ಟ್ ನಲ್ಲಿ ಅವನು ಕೊಲೆ ಮಾಡಿಲ್ಲ ಎಂದು ಹೇಳಿದ್ದಾರೆ. ಹಾಗೆ ಹೇಳಲು ಇವರು ಯಾರು” ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಒಟ್ಟಿನಲ್ಲಿ ಸ್ನೇಹಮಯಿ ಕೃಷ್ಣ ಈ ಸ್ಫೋಟಕ ಹೇಳಿಕೆಯ ನಂತರ ಸೌಜನ್ಯ ಪ್ರಕರಣಕ್ಕೆ ಇನ್ನೊಂದು ಆಯಾಮ ಸಿಕ್ಕಿದಂತಾಗಿದೆ.