ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿ ದಿನ ದೂಡುತ್ತಿರುವ ನಟ ದರ್ಶನ್ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ” ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡಾ. ನನಗೆ ಮಾತ್ರ ಪಾಯಿಸನ್ ನೀಡಲಿ. ನ್ಯಾಯಾಲಯವೇ ಈ ಆದೇಶ ನೀಡಬೇಕು ” ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆಗ ಜಡ್ಜ್ ” ಹಾಗೆಲ್ಲ ನೀವು ಕೇಳುವಂತಿಲ್ಲ” ಎಂದು ದರ್ಶನ್ ಗೆ ಕಿವಿ ಮಾತು ಹೇಳಿದ್ದಾರೆ.
ಈ ಪ್ರಕರಣದ ಹಿನ್ನಲೆ ಎಲ್ಲರಿಗೂ ಗೊತ್ತಿದೆ. ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಹಿನ್ನಲೆಯಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ದರ್ಶನ್ ಹಾಗೂ ಪವಿತ್ರಾ ಗೌಡ ಗ್ಯಾಂಗ್ ಜೊತೆ ಸೇರಿ ಕೊಲೆ ಮಾಡಲಾಗಿದೆ ಎಂದು ಆರೋಪ ಇದೆ. ಈ ಆರೋಪದ ಹಿನ್ನಲೆಯಲ್ಲಿ ಆರೋಪಿಗಳು ಜೈಲು ಸೇರಿದ್ದಾರೆ. ದರ್ಶನ್ ಸೇರಿ ಇನ್ನಿತರ ಆರೋಪಿಗಳು ಕಳೆದ ವರ್ಷವೇ ಆರೆಸ್ಟ್ ಆಗಿದ್ದರು. ಆ ಬಳಿಕ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಕರ್ನಾಟಕ ಸರಕಾರ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು. ಸುಪ್ರೀಂಕೋರ್ಟ್ ದರ್ಶನ್ ಅವರ ಜಾಮೀನನ್ನು ರದ್ದು ಮಾಡಿತ್ತು. ಇನ್ನು ನಟ ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ನೀಡಬಾರದೆಂದು ಕೂಡ ಸೂಚನೆ ನೀಡಿತ್ತು. ಅದನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿ ಅಗತ್ಯ ಸೌಲಭ್ಯ ನೀಡುವಂತೆ ವಿನಂತಿಸಿದ್ದರು.
ಈಗ ನ್ಯಾಯಾಲಯ ಕನಿಷ್ಟ ಸೌಲಭ್ಯವನ್ನು ನೀಡಲು ಸೂಚನೆ ನೀಡಿದೆ. ಅದರಂತೆ ಜಮಾಖಾನ ನೀಡಲಾಗುತ್ತಿದೆ. ಹೆಚ್ಚುವರಿ ಬೆಡ್ ಮತ್ತು ದಿಂಬು ನೀಡಬಹುದು ಎಂದು ಹೇಳಿದೆ. ಇನ್ನು ಬಿಸಿಲು ನೋಡದೇ ಕೈಗೆ ಫಂಗಸ್ ಆಗಿದೆ ಎಂದು ಹೇಳಿರುವುದರಿಂದ ಬೆಳಿಗ್ಗೆ ಮತ್ತು ಸಂಜೆ ಜೈಲಿನ ಆವರಣದಲ್ಲಿ ವಾಕ್ ಮಾಡಲು ಕೂಡ ಅವಕಾಶ ನೀಡಲಾಗಿದೆ. ಇನ್ನು ಅಗತ್ಯ ಬಿದ್ದರೆ ಜೈಲಿನ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಕೋರ್ಟ್ ಹೇಳಿದೆ. ಇನ್ನು ಜೈಲಿನ ಕ್ಯಾಂಟಿನಿನಲ್ಲಿ ಏನಾದರೂ ಖರೀದಿಸಬಹುದು ಎಂದು ಅನುಮತಿ ಸಿಕ್ಕಿದೆ. ಆದರೆ ಯಾವುದೇ ಜೈಲು ನಿಯಮ ಉಲ್ಲಂಘಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಒಂದು ವೇಳೆ ಉಲ್ಲಂಘನೆ ಮಾಡಿದರೆ ವರ್ಗಾವಣೆಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ. ಬಟ್ಟೆಗಳು ವಾಸನೆ ಬರುತ್ತಿದೆ ಎಂದು ಗೋಳಾಡಿದ ದರ್ಶನ್ ಗೆ ಸ್ವಲ್ಪ ಸಮಾಧಾನ ಸಿಕ್ಕಿದೆ. ಕುಟುಂಬದವರು ಬಟ್ಟೆ ನೀಡಲು ಇವತ್ತು ಅವಕಾಶ ಸಿಕ್ಕಿದೆ.
ಇನ್ನು ಕ್ವಾರಂಟೈನ್ ಸೆಲ್ ನಿಂದ ಸಾಮಾನ್ಯ ಸೆಲ್ ಗೆ ಶಿಫ್ಟ್ ಮಾಡಲು ಜೈಲಾಧಿಕಾರಿಗಳು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲು ಏನೂ ಸಕಾರಣಗಳಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆದ್ದರಿಂದ ದರ್ಶನ್ ಇನ್ನು ಮುಂದೆ ಒಂದಿಷ್ಟು ಸೌಕರ್ಯಗಳನ್ನು ಜೈಲಿನ ನಿಯಮಾವಳಿಗಳ ವ್ಯಾಪ್ತಿಯೊಳಗೆ ಪಡೆಯಲು ಅವಕಾಶ ಸಿಕ್ಕಿದೆ.