ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಗಣಪತಿ ಗಲಾಟೆ ಮುಸ್ಲಿಮರಿಂದಲೇ ಆಗಿದ್ದು, ಅದಕ್ಕೆ ಕಾರಣರಾದವರ ಬಂಧನವಾಗಿದೆ. ಹಿಂದೂಗಳ ಮೇಲೆ ಎಫ್ ಐಆರ್ ಹಾಕಿ ಬಂಧಿಸಿಲ್ಲ ಎಂದು ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ಸ್ಪಷ್ಟಪಡಿಸಿದರು. ಬುಧವಾರ ಮಾತನಾಡಿ, ಬಂಧಿತರಲ್ಲಿ ಇಬ್ಬರು ಚನ್ನಪಟ್ಟದವರು, ಉಳಿದವರು ಮದ್ದೂರಿನವರು. ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಕೊಂಚ ವೈಫಲ್ಯವಾಗಿರುವ ಅನುಮಾನವಿದೆ. ತನಿಖೆ ಮುಗಿಯುವವರೆಗೂ ಏನೂ ಹೇಳುವುದಿಲ್ಲ ಎಂದು ಚೆಲುವರಾಯ ಸ್ವಾಮಿ ಹೇಳಿದ್ದಾರೆ.
ಈ ನಡುವೆ ಬುಧವಾರ ನಡೆದ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ಸಂಪೂರ್ಣ ಕೇಸರಿಮಯವಾಗಿತ್ತು. ಮದ್ದೂರು ಕ್ಷೇತ್ರವ್ಯಾಪ್ತಿಯ ಕೆ.ಎಂ.ದೊಡ್ಡಿ ಸೇರಿ ಸುತ್ತಮುತ್ತಲ ಗ್ರಾಮಗಳ 15 ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪೊಲೀಸರ ಸರ್ಪಗಾವಲಿನಲ್ಲಿ ಶಿಂಷಾ ನದಿಯಲ್ಲಿ ಸಂಜೆ ವಿಸರ್ಜನೆ ಮಾಡಲಾಯಿತು.
ಕಲ್ಲು ತೂರಿದವರ ಮೇಲೆ ಜೆಸಿಬಿ ಹತ್ತಿಸಿ: ಸಿಟಿ ರವಿ
ತಾಕತ್ತಿದ್ದರೆ ಗಣೇಶ ಮೆರವಣಿಗೆಗೆ ಕಲ್ಲೆಸೆದವರ ಮೇಲೆ ಜೆಸಿಬಿ ಹತ್ತಿಸಿ, ಇಲ್ಲದಿದ್ದರೆ ಇಲ್ಲೂ ಯೋಗಿ ಆದಿತ್ಯನಾಥರಂತವರು ಬರುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಎಚ್ಚರಿಸಿದ್ದಾರೆ.
ಕಲ್ಲೆಸೆದವರ ಮೇಲೆ ಗೂಂಡಾ ಕಾಯ್ದೆ ಹಾಕಿ: ಅಶ್ವಥ್ ನಾರಾಯಣ್ ಸವಾಲು
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಲೈಕೆ ರಾಜಕೀಯ ಮಾಡುತ್ತಿದೆ. ತಾಕತ್ತಿದ್ದರೆ ಮೆರವಣಿಗೆ ವೇಳೆ ಕಲ್ಲೆಸೆದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಿ ಎಂದು ಶಾಸಕ ಸಿ.ಎನ್. ಅಶ್ವಥ್ ನಾರಾಯಣ ಸವಾಲು ಹಾಕಿದ್ದಾರೆ.
ಸಿಎಂ ಸಿದ್ದುರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು: ಆರ್ ಅಶೋಕ್
ಸಿದ್ಧರಾಮಯ್ಯ ಬೆಂಬಲ ಮುಸಲ್ಮಾನರಿಗೆ ಹೆಚ್ಚು ಇರುವುದರಿಂದ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಕರ್ನಾಟಕವನ್ನು ಇಟಲಿ ಸರಕಾರ, ತಾಲಿಬಾನ್, ಮುಲ್ಲಾ ಸರಕಾರ ಆಗಲು ಬಿಡುವುದಿಲ್ಲ ಎಂದು ವಿಪಕ್ಷ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ಓಲೈಕೆಗೆ ಕಾಂಗ್ರೆಸ್ ಕುಮ್ಮಕ್ಕು: ಬಿವೈವಿ ಟೀಕೆ
ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದ ಕಾಂಗ್ರೆಸ್ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸಕ್ಕೆ ಕುಮ್ಮಕ್ಕು ನೀಡುತ್ತಿದೆ. ಅಯೋಗ್ಯ ಕಾಂಗ್ರೆಸ್ಸಿಗರ ಮಾತಿನಿಂದ ಮುಸ್ಲಿಂ ಯುವಕರು ಕಲ್ಲು ಎಸೆಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಒಟ್ಟಿನಲ್ಲಿ ಮಸೀದಿಯ ಮೇಲಿನಿಂದ ಗಣೇಶೋತ್ಸವದತ್ತ ಕೆಲವರು ಎಸೆದ ಕಲ್ಲು ರಾಜ್ಯದಲ್ಲಿ ಕೇಸರಿ ಪಾಳಯ ಹಾಗೂ ಸರಕಾರದ ನಡುವೆ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದೆ.