ಹಿಂದೂಗಳ ಶಕ್ತಿ ದಮನ ಮಾಡುತ್ತಿರುವ ಸರಕಾರ:ಕಟೀಲ್
ಮಂಗಳೂರು: ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಮತ್ತು ಮತಾಂಧ ಸಂಘಟನೆಗಳಿಗೆ ಬೆಂಬಲ ನೀಡಿದ್ದರಿಂದ ರಾಜ್ಯದಲ್ಲಿ ಹಿಂದೂ ಸಂಘಟನೆಗಳು 12 ಕಾರ್ಯಕರ್ತರ ಹತ್ಯೆಯಾಗಿದೆ. ಆದರೂ ಇದುವರೆಗೆ ಒಬ್ಬರೇ ಒಬ್ಬ ಆರೋಪಿಗಳನ್ನು ಬಂಧಿಸಿಲ್ಲ. ಅಲ್ಲದೇ ಮತಾಂಧ ಸಂಘಟನೆಗಳಾದ, ಕೊಲೆಯಲ್ಲಿ ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದರೂ ರಾಜ್ಯ ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಸಂಸದ ನಳೀನ್ ಕುಮಾರ ಕಟೀಲ್ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನ ಗಾಂಧಿ ವೃತ್ತದಲ್ಲಿ ನಡೆದ ಮಂಗಳೂರು ಚಲೋ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ 12 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಹತ್ಯೆಯ ಹಿಂದೆ ಮತಾಂಧ ಸಂಘಟನೆಗಳ ಕೈವಾಡ ಇರುವುದು ತನಿಖೆಯಿಂದ ತಿಳಿದು ಬಂದಿದೆ. ಆದರೂ ಸರಕಾರ ಮತಾಂಧ ಸಂಘಟನೆಗಳನ್ನು ನಿಷೇಧಿಸಿಲ್ಲ. ಬದಲಾಗಿ ಹಿಂದೂ ಹೋರಾಟಗಾರರನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಕರಾವಳಿ ಜಿಲ್ಲೆಯಲ್ಲಿ ಗೋ ಹಂತಕರು ರಾಜಾರೋಷವಾಗಿ ತಿರುಗುತ್ತಿದ್ದಾರೆ. ಅಲ್ಲಲ್ಲಿ ಪಿಎಫ್‌ಐ ಹಾಗೂ ಮತಾಂಧ ಸಂಘಟನೆಗಳು ಸಮಾಜ ದ್ರೋಹಿ ಕಾರ್ಯದಲ್ಲಿ ನಿರತವಾಗಿದ್ದರೂ ಹಿಂದೂಗಳ ವಿರುದ್ಧ ಸರಕಾರ ಸುಳ್ಳು ಪ್ರಕರಣ ದಾಖಲಿಸುತ್ತಿಿದೆ. ಆದ್ದರಿಂದ ಕರಾವಳಿ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಕೂಡಲೇ ಮತಾಂಧ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಸಂಸದ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ಮಾತನಾಡಿ, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಸರಕಾರ ಕ್ರಮ ಕೈಗೊಳ್ಳದೇ ಹಿಂದೂಗಳನ್ನೇ ದಮನ ಮಾಡುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹಿಂದೂಗಳ ಹತ್ಯೆಯಾದರೂ ಸರಕಾರ, ಪಿಎಫ್‌ಐ ಸೇರಿ ಮತಾಂಧ ಸಂಘಟನೆಗಳ ಮೇಲಿನ ಪ್ರಕರಣ ಹಿಂಪಡೆದು ಹಿಂಸಾ ಕಾರ್ಯಗಳಿಗೆ ಪ್ರೇರಣೆ ನೀಡುತ್ತಿದೆ. ಕೆಎಫ್‌ಡಿ, ಪಿಎಫ್‌ಐ ನಿಷೇಧಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ಮುಖಂಡರಾದ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ಪ್ರಮುಖರಾದ ಶೋಭಾ ಕರಂದ್ಲಾಜೆ, ಆರ್.ಅಶೋಕ್, ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಸುನಿಲ್ ಕುಮಾರ್ ಇದ್ದರು.
Leave A Reply