ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ “ಕರ್ನಾಟಕ ರತ್ನ” ಪ್ರಶಸ್ತಿ ಘೋಷಣೆ!

ಕರ್ನಾಟಕ ಸರ್ಕಾರವು ನಟ ಡಾ.ವಿಷ್ಣುವರ್ಧನ್ ಮತ್ತು ನಟಿ ಬಿ. ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ಇಂದು (ಸೆ.11) ಸಚಿವ ಹೆಚ್.ಕೆ. ಪಾಟೀಲ್ ಅವರು ಈ ವಿಷಯ ತಿಳಿಸಿದರು. ಈ ಸಿಹಿ ಸುದ್ದಿ ಕೇಳಿ ಅಭಿಮಾನಿಗಳಿಗೆ ಬಹಳ ಸಂತಸ ಆಗಿದೆ. ಈ ಮೊದಲು ಚಿತ್ರರಂಗದಿಂದ ಡಾ. ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು.
ಕನ್ನಡ ಚಿತ್ರರಂಗದಲ್ಲಿ ಜೀವಮಾನ ಸೇವೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ ನಟ ಡಾ.ವಿಷ್ಣುವರ್ಧನ್ ಹಾಗೂ ಇತ್ತೀಚೆಗೆ ಇಹಲೋಕ ತ್ಯಜಿಸಿದ ನಟಿ ಬಿ. ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಇಬ್ಬರಿಗೂ ಮರಣೋತ್ತರ ಪ್ರಶಸ್ತಿ ನೀಡಲಾಗುತ್ತದೆ. ಜೊತೆಗೆ, ಕನ್ನಡದ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದ ಎಲ್ಲ ಸಿನಿಮಾ ಗಣ್ಯರಿಂದ ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ ಕೇಳಿಬಂದಿತ್ತು. ಕಳೆದೊಂದು ತಿಂಗಳಿಂದ ವಿಷ್ಣುವರ್ಧನ್‌ಗೆ ಕರ್ನಾಟಕ ಪ್ರಶಸ್ತಿ ನೀಡಲೇಬೇಕು ಎಂದು ನೂರಕ್ಕೂ ಅಧಿಕ ಹಿರಿಯ ಕಲಾವಿದರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದರು.
ಇತ್ತೀಚೆಗೆ ಬೆಂಗಳೂರಿನ ಅಭಿಮಾನ್ ಸ್ಟೂಡಿಯೋದಲ್ಲಿದ್ದ ವಿಷ್ಣುವರ್ಧನ್ ಸ್ಮಾರಕವನ್ನು ರಾತ್ರೋರಾತ್ರಿ ತೆರವು ಮಾಡಲಾಗಿದ್ದರಿಂದ, ಅಭಿಮಾನಿಗಳ ಆಕ್ರೋಶ ಕಟ್ಟೆ ಒಡೆದಿತ್ತು. ಅಭಿಮಾನ್ ಸ್ಟೂಡಿಯೋದಲ್ಲಿ 20 ಅಡಿ ಜಾಗ ಕೊಡದ ಸರ್ಕಾರದ ವಿರುದ್ಧ ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದೀಗ ಸಾಹಸಸಿಂಹ ವಿಷ್ಣುವರ್ಧನ್‌ಗೆ ಕರ್ನಾಟಕ ಪ್ರಶಸ್ತಿ ನೀಡುವ ಮೂಲಕ ಎಲ್ಲರ ಆಕ್ರೋಶ ತಣಿಸುವ ಕಾರ್ಯಕ್ಕೆ ಮುಂದಾಗಿದೆ.
ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಅಲ್ಲದೇ, ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಶ್ರುತಿ, ಮಾಳವಿಕಾ ಅವಿನಾಶ್ ಅವರು ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು.
1972ರಲ್ಲಿ ವಿಷ್ಣುವರ್ಧನ್ ಅವರು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ವರ್ಷ ಅವರು ನಟಿಸಿದ ‘ವಂಶವೃಕ್ಷ’, ‘ನಾಗರಹಾವು’ ಸಿನಿಮಾಗಳು ಬಿಡುಗಡೆ ಆದವು. ಬಳಿಕ ಕನ್ನಡ ಚಿತ್ರರಂಗದಲ್ಲಿ ಅವರು ಭರವಸೆಯ ನಟನಾಗಿ ಬೆಳೆದರು. ಹಲವು ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡರು. ಅಭಿಮಾನಿಗಳ ಪಾಲಿಗೆ ‘ಸಾಹಸ ಸಿಂಹ’ ಎನಿಸಿಕೊಂಡರು. ಚಿತ್ರರಂಗದಲ್ಲಿ ಅವರು ಮಾಡಿದ ಸಾಧನೆಯನ್ನು ಗುರುತಿಸಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗಿದೆ.