ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

ಏಷ್ಯಾ ಕಪ್ ಟ್ವೆಂಟಿ ಓವರ್ ಕ್ರೀಡಾಕೂಟ ನಡೆಯುತ್ತಿದ್ದು, ಭಾನುವಾರ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆದಿದೆ. ಇದರಲ್ಲಿ ಪಾಕಿಸ್ತಾನವನ್ನು ಭಾರತ ಬಗ್ಗುಬಡಿದು ವಿಜಯ ಪತಾಕೆ ಹಾರಿಸಿದೆ. ಭಾರತ ಗೆದ್ದಿರುವುದು ನಿಜ. ಆದರೆ ಈ ಪಂದ್ಯ ಅಗತ್ಯ ಇತ್ತಾ ಎನ್ನುವುದು ಅನೇಕರ ಅಭಿಪ್ರಾಯ. ಯಾಕೆಂದರೆ ಪಾಕ್ ಪ್ರಾಯೋಜಿತ ಉಗ್ರಗಾಮಿಗಳು ಇದೇ ಎಪ್ರಿಲ್ 22 ರಂದು ಕಾಶ್ಮೀರದಲ್ಲಿರುವ ಪೆಹಲ್ಗಾಮ್ ನಲ್ಲಿ ದಾಳಿ ನಡೆಸಿ 26 ನಾಗರಿಕರನ್ನು ಹತ್ಯೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಆಪರೇಶನ್ ಸಿಂಧೂರದ ಮೂಲಕ ಪಾಕ್ ನಲ್ಲಿ ಅಡಗಿ ಕುಳಿತಿದ್ದ ಉಗ್ರಗಾಮಿಗಳಿಗೆ ಬುದ್ಧಿ ಕಲಿಸಿತ್ತು.
ಆದರೆ ಅದರ ನಂತರ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ತಟಸ್ಥ ರಾಷ್ಟ್ರದಲ್ಲಿ ಪರಸ್ಪರ ಜೊತೆಯಾಗಿವೆ. ಭಾರತ ಇಲ್ಲಿ ಪಂದ್ಯಾಟವನ್ನು ಗೆದ್ದುಕೊಂಡಿದೆ. ಈ ಪಂದ್ಯದ ವಿರುದ್ಧ ಕೆಲವು ವಿಷಯಗಳು ಈಗ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಪೆಹಲ್ಗಾಂನಲ್ಲಿ ಮಡಿದವರ ಕುಟುಂಬದ ಸದಸ್ಯರು ಈ ಪಂದ್ಯಾಟದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದರ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಪಂದ್ಯಾಟದ ವಿರುದ್ಧವೂ ಅಸಮಾಧಾನ ಬುಗಿಲೆದ್ದಿದೆ.
ಕೆಲವರು ನಾವು ಪಂದ್ಯಾಟವನ್ನು ನೋಡುವುದೇ ಇಲ್ಲ ಎಂದು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ನಾನು ಈ ಪಂದ್ಯಾಟದ ಒಂದೇ ಒಂದು ಎಸೆತವನ್ನು ನೋಡದೇ ಕುಳಿತಿದ್ದೇನೆ ಎಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಶತ್ರು ರಾಷ್ಟ್ರವಾಗಿರುವುದರಿಂದ ಇದು ಕೇವಲ ಕ್ರೀಡೆ ಎಂದು ಎಷ್ಟೇ ಅಂದುಕೊಂಡರೂ ಎಪ್ರಿಲ್ ನಲ್ಲಿ ನರಮೇಧವನ್ನು ಅಷ್ಟು ಬೇಗ ಭಾರತ ಮರೆಯಿತಾ ಎಂದು ಕೆಲವರು ಬರೆದಿದ್ದಾರೆ. ಹಣ, ಜಾಹೀರಾತು ಮತ್ತು ವ್ಯವಹಾರಗಳ ಎದುರು ಮಾನವೀಯತೆ ಸೋತಿದೆ ಎಂದು ಕೆಲವರು ಬರೆದಿದ್ದಾರೆ. ಭಾರತದ ಆಟಗಾರರು ಪಂದ್ಯದ ಬಳಿಕ ಸಂಪ್ರದಾಯದಂತೆ ಎದುರಾಳಿ ತಂಡದ ಹಸ್ತಲಾಘವ ನಡೆಸದೇ ಪಾಕಿಗಳ ವಿರುದ್ಧ ಮೌನವಾಗಿ ಆಕ್ರೋಶ ಹೊರಹಾಕಿದ್ದಾರೆ. ಅದು ಒಳ್ಳೆಯ ನಡೆ ಎಂದು ಹಲವರು ಬರೆದಿದ್ದಾರೆ.
ಇನ್ನು ಕೆಲವರು ಐಸಿಸಿ ಅಧ್ಯಕ್ಷ ಜಯ್ ಶಾ, ಭಾರತದ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರನ್ನು ಕೂಡ ಇದಕ್ಕೆ ಎಳೆದು ತಂದು ಭಾರತ ಕ್ರಿಕೆಟ್ ತಂಡವನ್ನು ಪಾಕಿಸ್ತಾನದ ವಿರುದ್ಧ ಆಡಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಈ ಕ್ರೀಡಾಕೂಟ ಇನ್ನು ಮುಂದಿನ ದಿನಗಳಲ್ಲಿ ರೋಚಕತೆಯನ್ನು ಪಡೆಯಲಿದ್ದು, ಒಂದು ವೇಳೆ ಫೈನಲ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ಎದುರುಬದರಾದರೆ ಆಗ ಈ ಸಾಮಾಜಿಕ ಜಾಲತಾಣಗಳಲ್ಲಿ ಪರ- ವಿರೋಧ ಇನ್ನಷ್ಟು ಕಾವು ಪಡೆಯುವ ಸಾಧ್ಯತೆ ಇದೆ.
ಈ ನಡುವೆ ಪಂದ್ಯದ ಗೆಲುವನ್ನು ಭಾರತೀಯ ಯೋಧರಿಗೆ ಅರ್ಪಿಸುವುದಾಗಿ ಭಾರತ ಟಿ20 ಕಪ್ತಾನ ಸೂರ್ಯ ಕುಮಾರ್ ಯಾದವ್ ಹೇಳಿದ್ದಾರೆ. ಇನ್ನು ನಾವು ಪೆಹಲ್ಗಾಂ ಸಂತಸ್ತರ ಪರವಾಗಿ ಯಾವಾಗಲೂ ಇದ್ದೇವೆ ಎಂದು ಅವರು ತಿಳಿಸಿದ್ದಾರೆ.