ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!

ಈಗಿನ ಆಧುನಿಕ ಕಾಲದಲ್ಲಿ ತಂತ್ರಜ್ಞಾನ ಇಲ್ಲದೆಯೇ ಬದುಕುವುದು ಕಷ್ಟಸಾಧ್ಯ. ತಂತ್ರಜ್ಞಾನ ನಮ್ಮ ಬದುಕನ್ನು ಸುಲಭಗೊಳಿಸುತ್ತದೆ ಎನ್ನುವುದರ ನಡುವೆ ಅದನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿಕೊಂಡರೆ ಅದು ನಮ್ಮ ನೆಮ್ಮದಿಗೂ ಮಾರಕವಾಗುತ್ತದೆ ಎನ್ನುವುದು ನಮಗೆ ಯಾವತ್ತೂ ನೆನಪಿದ್ದರೆ ಸಾಕು. ಅದಕ್ಕೆ ತಾಜಾ ಉದಾಹರಣೆ ಈಗ ಟ್ರೆಂಡಿಂಗ್ ನಲ್ಲಿರುವ ಜೆಮಿನಿ ಏಪ್. ತಮ್ಮದೊಂದು ಫೋಟೋ ಕೊಟ್ಟರೆ ಅದಕ್ಕೆ ಚೆಂದದ ಸೀರೆ ಉಡಿಸಿ, ಆಭರಣ ತೊಡಿಸಿ, ಹೂ ಮುಡಿಸಿ, ಸಿಂಗರಿಸುವ ಜಿಮಿನಿ ಎಐ ತಂತ್ರಜ್ಞಾನವನ್ನು ಬಳಸದ ಸ್ತ್ರೀಯರೇ ಇಲ್ಲ ಎನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.
ಎಲ್ಲೋ ಮನಸ್ಸಿನ ಮೂಲೆಯಲ್ಲಿ ” ಹಾಗೆ ಮಾಡುವುದು ಅಪಾಯಕಾರಿಯಾದೀತು” ಎಂದು ಅನಿಸಿದರೂ ತಾನು ಯಾವುದರಲ್ಲಿಯೂ ಹಿಂದೆ ಬೀಳಬಾರದು ಎನ್ನುವ ಕಾರಣಕ್ಕೆ ಇಂದಿನ ಯುವ ಜನಾಂಗ ಇಂತಹ ಟ್ರೆಂಡಿಂಗ್ ನ ಭಾಗವಾಗುತ್ತದೆ. ನಂತರ ಏನಾದರೂ ವರ್ಚಸ್ಸಿಗೆ ದಕ್ಕೆ ಆದರೆ ಆಗ ಸಂಕಷ್ಟಕ್ಕೆ ಒಳಗಾಗುತ್ತದೆ. ಆದರೆ ಈಗ ಪೊಲೀಸ್ ಇಲಾಖೆಯೇ ಹೀಗೆ ಮಾಡುವುದು ನಿಮ್ಮನ್ನು ತೊಂದರೆಗೆ ಸಿಲುಕಿಸಲಿದೆ ಎಂದು ಎಚ್ಚರಿಕೆ ನೀಡಿದೆ. ಪೊಲೀಸರು ಎಚ್ಚರಿಕೆ ನೀಡಿರುವುದು ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಇದು ಹುಡುಗರಿಗೂ ಅನ್ವಯಿಸುತ್ತದೆ.
ಜಿಮಿನಿಯಲ್ಲಿ ಫೋಟೋ ಸೃಷ್ಟಿಸುವ ಬಗ್ಗೆ ಎಚ್ಚರಿಕೆ ನೀಡಿರುವ ಸೈಬರ್ ಅಧಿಕಾರಿಗಳು, ” ಜಿಮಿನಿ ಏಪ್ ನ ನಿಯಮಗಳ ಪ್ರಕಾರ, ಅಪ್ ಲೋಡ್ ಮಾಡಲಾಗುವ ಎಲ್ಲಾ ಫೋಟೋಗಳನ್ನು ಅದು ಎಐ ತರಬೇತಿಗೆ ಬಳಸಿಕೊಳ್ಳಲಿದೆ. ಇದು ಗೌಪ್ಯತೆಗೆ ದಕ್ಕೆ, ಗುರುತು ಕಳವು, ಸೈಬರ್ ವಂಚನೆಗಳಿಗೆ ಎಡೆ ಮಾಡಿಕೊಡಲಿದೆ” ಎಂದು ಹೇಳಿದ್ದಾರೆ.
“ನಾವು ನಮ್ಮ ಸಂತೋಷಕ್ಕೆ ಫೋಟೋ ಅಪಲೋಡ್ ಮಾಡುತ್ತಿದ್ದರೆ, ಜಿಮಿನಿ ಆ ಬಯೋಮೆಟ್ರಿಕ್ ಡೇಟಾ ಬಳಸಿಕೊಂಡು ಮುಖಚರ್ಯೆ ಅಧ್ಯಯನ ಮಾಡುತ್ತಿರುತ್ತದೆ. ಅದನ್ನು ಬಳಸಿಕೊಂಡು ವಂಚನೆ ಅಥವಾ ಅಪರಾಧಗಳೂ ಆಗುವ ಸಾಧ್ಯತೆ ಹೆಚ್ಚು” ಎಂದು ಮಹಿಳಾ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಒಂದು ಫೋಟೋ ಹಾಕಿ ನಿರ್ದೇಶನ ಕೊಟ್ಟರೆ, ಜಿಮಿನಿ ಅದಕ್ಕನುಸಾರವಾಗಿ ಚಿತ್ರವನ್ನು ಸೃಷ್ಟಿಸಿಕೊಡುತ್ತದೆ. ಇದನ್ನು ಬಳಸಿಕೊಂಡು ಹುಡುಗಿಯರು ಸೀರೆ ಉಟ್ಟು ಸಂಭ್ರಮಿಸುತ್ತಿದ್ದರೆ, ಹುಡುಗರು ಹಿಂದಿನ ಕಾಲದ ಹೀರೋಗಳಂತೆ ತಮ್ಮನ್ನು ತಾವು ಕಂಡು ಖುಷಿಪಡುತ್ತಿದ್ದಾರೆ. ಸದ್ಯ ಇದು ಟ್ರೆಂಡಿಂಗ್ ನಲ್ಲಿದೆ. ಆದರೆ ಇದು ಅನಾವಶ್ಯಕವಾಗಿ ನಮ್ಮ ಗೌಪ್ಯತೆಯನ್ನು ಲೀಕ್ ಮಾಡಿ ಸೈಬರ್ ವಂಚಕರ ಮೋಸದಾಟಕ್ಕೆ ಗುರಿ ಮಾಡುತ್ತದೆ ಎನ್ನುವುದು ನಮಗೆ ಗೊತ್ತಿರಲಿ. ಜನಜಾಗೃತಿಗಾಗಿ ತುಳುನಾಡು ನ್ಯೂಸ್.